ಪ್ರಾತಿನಿಧಿಕ ಚಿತ್ರ
ಯಲ್ಲಾಪುರ: ತಾಲ್ಲೂಕಿನ ಇಡಗುಂದಿಯಲ್ಲಿ ಗಜಾನನೋತ್ಸವದ ಕಾರ್ಯಕ್ರಮದಲ್ಲಿ ಗಲಾಟೆ, ಹೊಡೆದಾಟ ನಡೆದ ಬಗ್ಗೆ ಮಂಗಳವಾರ ದೂರು ದಾಖಲಾಗಿದೆ.
ವಜ್ರಳ್ಳಿ ಮಾರ್ಕಿಜಡ್ಡಿಯ ವಿನೋದ ನಾಯ್ಕ, ಇಡಗುಂದಿಯ ಮಾರುತಿ ನಾಯ್ಕ, ಉದಯ ಮೇಸ್ತಾ, ವಸಂತ ನಾಯ್ಕ, ವಿಘ್ನೇಶ ನಾಯ್ಕ, ಅಣ್ಣಪ್ಪ ರಾಯ್ಕರ್ ಹಾಗೂ ಸಂತೋಷ ನಾಯ್ಕ ಎಂಬವರ ವಿರುದ್ದ ಗಂಗಾಧರ ನಾಯ್ಕ ದೂರು ನೀಡಿದ್ದು ಹೊಡೆದಾಟದಲ್ಲಿ ತಮಗೆ ಹಾಗೂ ಮಂಜುನಾಥ ವಡ್ಡರ್ ಅವರಿಗೆ ಪೆಟ್ಟಾಗಿದೆ ಎಂದು ತಿಳಿಸಿದ್ದಾರೆ.
ಇಡಗುಂದಿಯಲ್ಲಿ ಸಾರ್ವಜನಿಕ ಗಣೇಶ ಉತ್ಸವ ಅಂಗವಾಗಿ ಸೆಪ್ಟೆಂಬರ್ 1ರ ರಾತ್ರಿ ಆರ್ಕೇಸ್ಟ್ರಾ ಕಾರ್ಯಕ್ರಮ ನಡೆಯುತ್ತಿತ್ತು. ಆ ವೇಳೆ ಮಂಜುನಾಥ ವಡ್ಡರ್ ಅವರು ಅಲ್ಲಿ ಗಲಾಟೆ ಶುರು ಮಾಡಿದ್ದರು. ಆ ಗಲಾಟೆ ಸಹಿಸದ ಉದಯ ಮೇಸ್ತಾ ಅವರು ಮಂಜುನಾಥ ವಡ್ಡರ್ ಅವರಿಗೆ ಸುಮ್ಮನಿರುವಂತೆ ಸೂಚಿಸಿದರು.
ಅದಾಗಿಯೂ ಸುಮ್ಮನಿರದ ಕಾರಣ ವಸಂತ ನಾಯ್ಕ, ವಿಘ್ನೇಶ ನಾಯ್ಕ, ಅಣ್ಣಪ್ಪ ರಾಯ್ಕರ್ ಹಾಗೂ ಸಂತೋಷ ನಾಯ್ಕ ಸೇರಿ ಮಂಜುನಾಥ ವಡ್ಡರ್ ಅವರಿಗೆ ಹೊಡೆದು ಹೊರಗೆ ಎಳೆದೊಯ್ದರು. ಇದನ್ನು ನೋಡಿದ ಗಂಗಾಧರ ನಾಯ್ಕ ಅವರು ಮಂಜುನಾಥ ವಡ್ಡರ್ ಅವರ ರಕ್ಷಣೆಗೆ ತೆರಳಿದರು.
ಆಗ, ಅಲ್ಲಿಗೆ ಬಂದ ವಿನೋದ ನಾಯ್ಕ ಹಾಗೂ ಮಾರುತಿ ನಾಯ್ಕ ಅವರು ಗಂಗಾಧರ ನಾಯ್ಕ ಅವರನ್ನು ಹಿಡಿದು ಹೊಡೆದರು ಎಂದು ದೂರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.