ADVERTISEMENT

‘ರೈತರ ವಿಶ್ವಾಸಕ್ಕೆ ದ್ರೋಹವಾಗದಂತೆ ಆಡಳಿತ: ಎನ್.ಕೆ.ಭಟ್ಟ ಅಗ್ಗಾಸಿ ಕುಂಬ್ರಿ

ಟಿ.ಎಂ.ಎಸ್.ಗೆ ಎನ್.ಕೆ.ಭಟ್ಟ ಅಧ್ಯಕ್ಷ, ಕೋಣೆಮನೆ ಉಪಾಧ್ಯಕ್ಷರಾಗಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 4:35 IST
Last Updated 22 ಅಕ್ಟೋಬರ್ 2020, 4:35 IST
ಯಲ್ಲಾಪುರದ ಪ್ರತಿಷ್ಠಿತ ಟಿ.ಎಂ.ಎಸ್. ಸಹಕಾರಿ ಸಂಘದ ಅಧ್ಯಕ್ಷರಾಗಿ ನಾರಾಯಣ ಭಟ್ಟ ಅಗ್ಗಾಸಿ ಕುಂಬ್ರಿ, ಉಪಾಧ್ಯಕ್ಷರಾಗಿ ನರಸಿಂಹ ಭಟ್ಟ ಕೋಣೆಮನೆ ಆಯ್ಕೆಯಾದರು
ಯಲ್ಲಾಪುರದ ಪ್ರತಿಷ್ಠಿತ ಟಿ.ಎಂ.ಎಸ್. ಸಹಕಾರಿ ಸಂಘದ ಅಧ್ಯಕ್ಷರಾಗಿ ನಾರಾಯಣ ಭಟ್ಟ ಅಗ್ಗಾಸಿ ಕುಂಬ್ರಿ, ಉಪಾಧ್ಯಕ್ಷರಾಗಿ ನರಸಿಂಹ ಭಟ್ಟ ಕೋಣೆಮನೆ ಆಯ್ಕೆಯಾದರು   

ಯಲ್ಲಾಪುರ: ‘ತಾಲ್ಲೂಕಿನ ರೈತರು ನಮ್ಮ ಕಳೆದ ಆಡಳಿತದ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಿ ನಮ್ಮ ಆಯ್ಕೆಗೆ ಕಾರಣರಾಗಿದ್ದಾರೆ. ಇದು ರೈತರ ಗೆಲುವು ಅವರ ವಿಶ್ವಾಸಕ್ಕೆ ದ್ರೋಹವಾಗದಂತೆ ಆಡಳಿತ ನಡೆಸುತ್ತೇವೆ’ ಎಂದು ಟಿ.ಎಂ.ಎಸ್. ಸಹಕಾರಿ ಸಂಘದ ನೂತನ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಸಿ ಕುಂಬ್ರಿ ಹೇಳಿದರು.

ಟಿ.ಎಂ.ಎಸ್. ಸಂಘದ ಅಧ್ಯಕ್ಷರಾಗಿ ಬುಧವಾರ ಪುನರಾಯ್ಕೆಯಾದ ನಂತರದಲ್ಲಿ ಸದಸ್ಯರನ್ನುದ್ದೇಶಿಸಿ ಅವರು ಮಾತನಾಡಿದರು.

ತಾಲ್ಲೂಕಿನ ರೈತರು ಸಂಘದ ಮೇಲೆ ವಿಶ್ವಾಸವಿಟ್ಟು ಸಂಘದಲ್ಲಿಯೇ ವ್ಯವಹರಿಸಿ, ಅವರ ಕಷ್ಟದ ಸಮಯದಲ್ಲಿ ಸಂಘವು ಅವರ ನೆರವಿಗೆ ನಿಲ್ಲುತ್ತದೆ ಎಂದು ಮಾರ್ಮಿಕವಾಗಿ ನುಡಿದ ಅವರು, ತಾಲ್ಲೂಕಿನ ರೈತರು ವೈದ್ಯಕೀಯ ಸೌಲಭ್ಯಕ್ಕೆ ಪರ ಊರಿಗೆ ಅಲೆಯುವುದನ್ನು ತಪ್ಪಿಸಲು ಟಿ.ಎಂ.ಎಸ್. ವತಿಯಿಂದ ಸುಸಜ್ಜಿತ ಆಸ್ಪತ್ರೆಯೊಂದನ್ನು ನಿರ್ಮಿಸಬೇಕೆಂಬ ಅಭಿಲಾಷೆ ಹೊಂದಿದ್ದೇವೆ ಎಂದರು.

ADVERTISEMENT

ಇದಕ್ಕೂ ಪೂರ್ವದಲ್ಲಿ ಚುನಾವಣಾಧಿಕಾರಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರ ಸಮ್ಮುಖದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಎನ್.ಕೆ.ಭಟ್ಟ ಅಗ್ಗಾಸಿ ಕುಂಬ್ರಿ, ಉಪಾಧ್ಯಕ್ಷರಾಗಿ ನರಸಿಂಹ ಭಟ್ಟ ಕೋಣೆಮನೆ ಆಯ್ಕೆಯಾದರು.

ಉಪಾಧ್ಯಕ್ಷ ನರಸಿಂಹ ಕೋಣೆಮನೆ ಮಾತನಾಡಿದರು. ನೂತನ ಪದಾಧಿಕಾರಿ ಮಂಡಳಿಗೆ ಶುಭಕೋರಿ ಹಿರಿಯರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಎಂ.ಆರ್ ಹೆಗಡೆ ಕುಂಬ್ರಿಗುಡ್ಡೆ, ಮಾಜಿ ಅಧ್ಯಕ್ಷರಾದ ಎಲ್.ಪಿ ಹೆಗಡೆ ಗುಂಡ್ಕಲ್, ಎಲ್.ಎಸ್.ಎಂ.ಪಿ ಸೊಸೈಟಿ ಉಪಾಧ್ಯಕ್ಷ ಟಿ.ಆರ್.ಹೆಗಡೆ ಮಾತನಾಡಿದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರಿಗೆ ವಿವಿಧ ಸಹಕಾರಿ ಸಂಘಗಳವತಿಯಿಂದ ಹಾಗೂ ವಿವಿಧ ರೈತ ಮುಖಂಡರು ಹೂವಿನ ಹಾರ ಹಾಕಿ ಅಭಿನಂದಿಸಿದರು.

ಸಂಘದ ಮುಖ್ಯ ಕಾರ್ಯ ನಿರ್ವಾಹಕ ಸಿ.ಎಸ್. ಹೆಗಡೆ ಸ್ವಾಗತಿಸಿದರು. ವಿನಾಯಕ ಮೆಣಸುಮನೆ ನಿರೂಪಿಸಿದರು. ನಿರ್ದೇಶಕ ವೆಂಕಟ್ರಮಣ ಭಟ್ಟ ಕಿರಿಕುಂಬತ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.