ADVERTISEMENT

ಯುವಕರು ದೇಶಗಳ ಖಜಾನೆಯಿದ್ದಂತೆ: ಸಚಿವ ಅನಂತಕುಮಾರ್ ಹೆಗಡೆ

ಅಖಿಲ ಭಾರತ ನವ ಸೈನಿಕ ಶಿಬಿರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 12:57 IST
Last Updated 15 ಅಕ್ಟೋಬರ್ 2018, 12:57 IST
ಕಾರವಾರದಲ್ಲಿ ನಡೆಯುತ್ತಿರುವ ‘ಅಖಿಲ ಭಾರತ ನವ ಸೈನಿಕ ಶಿಬಿರ’ವನ್ನು ಉದ್ಘಾಟಿಸಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮಾತನಾಡಿದರು.
ಕಾರವಾರದಲ್ಲಿ ನಡೆಯುತ್ತಿರುವ ‘ಅಖಿಲ ಭಾರತ ನವ ಸೈನಿಕ ಶಿಬಿರ’ವನ್ನು ಉದ್ಘಾಟಿಸಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮಾತನಾಡಿದರು.   

ಕಾರವಾರ:ಎಲ್ಲ ದೇಶಗಳಿಗೂ ಯುವಕರು ಖಜಾನೆಯಿದ್ದಂತೆ. ಎನ್‌ಸಿಸಿಯಂತಹ ಸಂಘಟನೆಗಳು ಅವರ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುತ್ತವೆ. ಅವರನ್ನು ಸಮಾಜದ ಮುಖಂಡರು ಮತ್ತು ಉದ್ಯಮಿಗಳನ್ನಾಗಿಯೂ ರೂಪಿಸುತ್ತವೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಖಾತೆ ಸಚಿವ ಅನಂತಕುಮಾರ ಹೆಗಡೆ ಅಭಿಪ್ರಾಯಪಟ್ಟರು.

ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ ನವ ಸೈನಿಕ ಶಿಬಿರವನ್ನು (ಎಐಎನ್‌ಎಸ್‌ಸಿ) ಸೋಮವಾರ ವಿಧ್ಯುಕ್ತವಾಗಿ ಉದ್ಘಾಟಿಸಿ ಅವರು ಮಾತನಾಡಿದರು.

‘ಎನ್‌ಸಿಸಿಯು ಯುವಕರಲ್ಲಿ ಶಿಸ್ತು, ಒಗ್ಗಟ್ಟು, ತಂಡ ಸ್ಫೂರ್ತಿ, ಸಮಾಜ ಸೇವೆ ಮುಂತಾದ ಗುಣಗಳನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ಸಂಘಟನೆಯ ಸಮವಸ್ತ್ರವು ಅತ್ಯಂತ ಪ್ರಭಾವಶಾಲಿಯಾಗಿದೆ. ಇಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ದೇಶದ ಭದ್ರ ಭವಿಷ್ಯಕ್ಕೆ ಬುನಾದಿಯಾಗಲಿ. ರಾಷ್ಟ್ರಧ್ವಜವನ್ನು ಜೀವನಪೂರ್ತಿ ಅತ್ಯಂತ ಗೌರವದಿಂದ ಹೃದಯದಲ್ಲಿ ಮೆರೆಸಲು ಸ್ಫೂರ್ತಿಯಾಗಲಿ’ ಎಂದು ಆಶಿಸಿದರು.

ADVERTISEMENT

ಕ್ಯಾಪ್ಟನ್ ನಜ್ಮುಲ್ ಹೂಡಾ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ದೇಶದ ವಿವಿಧ ರಾಜ್ಯಗಳ 17 ಎನ್‌ಸಿಸಿ ಘಟಕಗಳ 590 ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ಏಳು ದಿನ ನಡೆಯುವ ಈ ಶಿಬಿರದಲ್ಲಿ ದೋಣಿ ಎಳೆಯುವುದು, ಬಂದೂಕಿನಿಂದ ಗುಂಡು ಹೊಡೆಯುವುದು, ಡ್ರಿಲ್, ನೌಕಾದಳದ ವಿವಿಧ ವಿಷಯಗಳು, ಹಡಗು ವಿನ್ಯಾಸ ರಚನೆ ಮುಂತಾದ 11 ಸ್ಪರ್ಧೆಗಳೂ ಇವೆ.

ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಕಮಾಂಡರ್ ದಿನೇಶ್ ಸಿಂಗ್, ಬ್ರಿಗೇಡಿಯರ್ ಡಿ.ಎಂ.ಪೂರ್ವಿಮಠ, ಕರ್ನಲ್ ಕೆ.ವಿ.ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.