ADVERTISEMENT

ಹಳ್ಳಿ ಯುವಕನ ಸಂಶೋಧನೆಗೆ ‘ಬೆಳ್ಳಿ’ ಗರಿ: ವಿಷಾನಿಲ ಶುದ್ಧೀಕರಿಸುವ ಸರಳ ಸಾಧನ

ವಿಷಾನಿಲ ಶುದ್ಧೀಕರಿಸುವ ಸರಳ ಸಾಧನದ ಮಾದರಿ ಅಭಿವೃದ್ಧಿ ಪಡಿಸಿದ ಕಾರ್ತಿಕ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 4:46 IST
Last Updated 1 ಡಿಸೆಂಬರ್ 2022, 4:46 IST
ವಿಷಾನಿಲ ಶುದ್ಧೀಕರಿಸಲು ಹೊನ್ನಾವರ ತಾಲ್ಲೂಕಿನ ಕೊಂಡದಕುಳಿ ಸಮೀಪದ ಬೈರಂಕಿಯ ಕಾರ್ತಿಕ್ ಕುಮಾರ್ ಬಾಗಿಲವೈದ್ಯ ಅಭಿವೃದ್ಧಿ ಪಡಿಸಿದ ಸಾಧನದ ಮಾದರಿ
ವಿಷಾನಿಲ ಶುದ್ಧೀಕರಿಸಲು ಹೊನ್ನಾವರ ತಾಲ್ಲೂಕಿನ ಕೊಂಡದಕುಳಿ ಸಮೀಪದ ಬೈರಂಕಿಯ ಕಾರ್ತಿಕ್ ಕುಮಾರ್ ಬಾಗಿಲವೈದ್ಯ ಅಭಿವೃದ್ಧಿ ಪಡಿಸಿದ ಸಾಧನದ ಮಾದರಿ   

ಕಾರವಾರ: ಕಾರ್ಖಾನೆಗಳಿಂದ ಹೊರ ಸೂಸುವ ವಿಷಾನಿಲಗಳನ್ನು ಶುದ್ಧೀಕರಿಸುವ ಸರಳ, ಕಡಿಮೆ ವೆಚ್ಚದಾಯಕ ಸಾಧನವನ್ನು ಅಭಿವೃದ್ಧಿ ಪಡಿಸಿದ ಹಳ್ಳಿ ಯುವಕ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ತಮ್ಮ ಶ್ರಮಕ್ಕೆ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ.

ಹೊನ್ನಾವರ ತಾಲ್ಲೂಕಿನ ಕೊಂಡದಕುಳಿ ಸಮೀಪದ ಬೈರಂಕಿ ನಿವಾಸಿ, ಎಂ.ಎಸ್ಸಿ ವಿದ್ಯಾರ್ಥಿ ಕಾರ್ತಿಕ್ ಕುಮಾರ್ ಬಾಗಿಲವೈದ್ಯ ಇಂಥ ಸಾಧನೆ ಮಾಡಿದವರು. ಗೋವಾದ ಮಡಗಾಂವ್‌ನಲ್ಲಿ ಈಚೆಗೆ ನಡೆದ, ‘ಇಂಡಿಯಾ ಇಂಟರ್‌ನ್ಯಾಷನಲ್ ಇನ್ನೋವೇಷನ್ ಮತ್ತು ಇನ್ವೆನ್ಷನ್ ಎಕ್ಸ್‌ಪೊ 2022’ರಲ್ಲಿ (ಐ.ಎನ್.ಇ.ಎಕ್ಸ್) ಅವರು ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ. ಈ ಪ್ರದರ್ಶನದಲ್ಲಿ 30ಕ್ಕೂ ಅಧಿಕ ದೇಶಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು.

ಕಾರ್ಖಾನೆಗಳು ಉಗುಳುವ ವಿಷಾನಿಲವನ್ನು ಶುದ್ಧೀಕರಿಸಲು ಅಳವಡಿಸುವ ‘ಇಲೆಕ್ಟ್ರೋ ಸ್ಟಾಟಿಕ್ ಪ್ರೆಸಿಪಿಟೇಟರ್’ (ಇ.ಎಸ್.ಪಿ) ಎಂಬ ಮಾದರಿಯನ್ನು ಅವರು ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಿ ಪ್ರದರ್ಶಿಸಿದ್ದರು.

ADVERTISEMENT

ತಾವು ಅಭಿವೃದ್ಧಿ ಪಡಿಸಿದ ಸಾಧನದ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ಕಾರ್ಖಾನೆಗಳ ಮಲಿನ ಗಾಳಿಯನ್ನು ಸುಮಾರು 2 ಸಾವಿರ ವೋಲ್ಟ್‌ಗಳಷ್ಟು ವಿದ್ಯುತ್‌ನ ಮೂಲಕ ಹಾಯಿಸಿದಾಗ, ಗಾಳಿಯಲ್ಲಿರುವ ಅತ್ಯಂತ ಸೂಕ್ಷ್ಮ ಕಣಗಳು ಒಂದಕ್ಕೊಂದು ಅಂಟಿಕೊಂಡು ಸ್ವಲ್ಪ ದೊಡ್ಡ ಕಣಗಳಾಗಿ ಗೋಚರಿಸುತ್ತವೆ. ಅವುಗಳನ್ನು ವೈಜ್ಞಾನಿಕ ವಿಧಾನದಲ್ಲಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಈ ಮೂಲಕ ಗಾಳಿಯು ಶೇ 99ರಷ್ಟು ಶುದ್ಧಗೊಳ್ಳುತ್ತದೆ’ ಎಂದು ವಿವರಿಸಿದರು.

‘ಮಾರುಕಟ್ಟೆಯಲ್ಲಿ ಈಗ ಲಭ್ಯವಿರುವ ಇ.ಎಸ್.ಪಿ ಸಾಧನಕ್ಕೆ ಲಕ್ಷಾಂತರ ರೂಪಾಯಿ ಬೆಲೆಯಿದೆ. ಹಾಗಾಗಿ ಬಹುತೇಕ ಕಾರ್ಖಾನೆಗಳು ಇದನ್ನು ಅಳವಡಿಸಲು ಹಿಂದೇಟು ಹಾಕುತ್ತವೆ. ನಾನು ಪ್ರಾಜೆಕ್ಟ್ ಸಲುವಾಗಿ ಮಾತ್ರ ಕಡಿಮೆ ವೆಚ್ಚದ ಸಾಧನವನ್ನು ಅಭಿವೃದ್ಧಿ ಮಾಡಿದ್ದು, ಸುಮಾರು ₹ 10 ಸಾವಿರದ ಒಳಗೆ ಖರ್ಚು ಮಾಡಿದ್ದೇನೆ’ ಎಂದರು.

‘ಈ ಮಾದರಿ ನಿರ್ಮಾಣಕ್ಕೆ ನನಗೆ ಭಟ್ಕಳದ ಮಾರುಕೇರಿ ಪ್ರೌಢಶಾಲೆಯ ಶಿಕ್ಷಕ ಜಿ.ವಿ.ಯಾಜಿ ಮಾರ್ಗದರ್ಶನ ಮಾಡಿದರು. ಹೊನ್ನಾವರದ ಎಸ್.ಡಿ.ಎಂ ಕಾಲೇಜಿನ ಉಪನ್ಯಾಸಕರು, ಮಾಜಿ ಶಾಸಕ ಮಂಕಾಳ ವೈದ್ಯ, ಮಹಿಮೆಯ ರಾಜೇಶ ನಾಯ್ಕ, ಗೆಳೆಯ ಪ್ರಮೋದ ಹೆಗಡೆ ಬಹಳ ಸಹಾಯ ಮಾಡಿದರು’ ಎಂದು ಹೆಮ್ಮೆಯಿಂದ ಹೇಳಿದರು.

ಹಳೆಯ ಡಯೋಡ್ ಬಳಕೆ:

‘ಹಳೆಯ ಬೈಕ್‌ನ ಇಗ್ನಿಷನ್ ಕಾಯಿಲ್, ಹಳೆಯ ಮಾದರಿಯ ಟಿ.ವಿ. ಡಯೋಡ್ (ಟಿ.ವಿ 20) ಬಳಕೆ ಮಾಡಿದ್ದೇನೆ. ಡಯೋಡ್ ಸುತ್ತಮುತ್ತ ಎಲ್ಲೂ ಸಿಗದ ಕಾರಣ ಉಡುಪಿಯ ಟಿ.ವಿ ದುರಸ್ತಿ ಅಂಗಡಿಯಿಂದ ಹುಡುಕಿ ತೆಗೆದುಕೊಂಡು ಬಂದೆ. ಇವುಗಳನ್ನು ಸಿಲಿಂಡರ್ ಮಾದರಿಯಲ್ಲಿ ಅಳವಡಿಸಿ ಅಗತ್ಯವಿರುವ ಇತರ ಸಲಕರಣೆಗಳನ್ನು ಜೋಡಿಸಿದ್ದೇನೆ. ಕಲ್ಲಿದ್ದಲಿನ ಪುಡಿಯನ್ನು ಬಳಸಿ ತಯಾರಿಸಿದ ಊದುಬತ್ತಿಯ ಹೊಗೆಯನ್ನು ಪರೀಕ್ಷೆಗೆ ಒಳಪಡಿಸಿ ಯಶಸ್ವಿಯಾಗಿದ್ದೇನೆ’ ಎಂದು ಕಾರ್ತಿಕ್ ಕುಮಾರ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.