
ಶಿರಸಿ: ‘ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಜತೆ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದೊಂದಿಗೆ ಸಂಸದ ಖೇಲ್ ಕ್ರೀಡಾ ಮಹೋತ್ಸವ ಸಂಘಟಿಸಲಾಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಸೋಮವಾರ ಸಂಸದ ಖೇಲ್ ಮಹೋತ್ಸವದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಧ್ವಜಾರೋಹಣ ನೇರವೇರಿಸಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
‘ಇತ್ತೀಚಿನ ಯುವ ಜನತೆ ಮೊಬೈಲ್, ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ವಿಮುಖರಾಗುತ್ತಿರುವುದು ವಿಷಾದನೀಯ. ಯುವಶಕ್ತಿಯು ಕ್ರೀಡೆಗಳಲ್ಲಿ ಸದ್ಬಳಕೆಯಾಗಬೇಕು ಎಂಬುದು ನಮ್ಮ ಆಶಯವಾಗಿದ್ದು, ಗ್ರಾಮೀಣ ಭಾಗದ ಯುವಕರಲ್ಲಿ ಬಡತನ ಇತ್ಯಾದಿ ಕಾರಣಗಳಿಂದ ಅವಕಾಶ ವಂಚಿತರಾಗಬಾರದು. ಅವರ ಪ್ರತಿಭೆ ಗುರುತಿಸುವ ಕೆಲಸ ಇಂತಹ ಕ್ರೀಡಾಕೂಟದಿಂದ ಮಾಡಲಾಗುತ್ತಿದೆ. ಭಾರತವು 2036 ರಲ್ಲಿ ಓಲಿಂಪಿಕ್ ಕ್ರೀಡೆ ಸಂಘಟಿಸಲು ಸಿದ್ಧತೆ ಮಾಡಿಕೊಂಡಿದ್ದು, ದೂರದೃಷ್ಟಿಯಿಂದ ದೇಶದ ಯುವಕರು ಈಗಿಂದಲೇ ತಯಾರಿಗೊಳ್ಳಬೇಕಾಗಿದೆ. 2030ರಲ್ಲಿ ಕಾಮನ್‌ವೆಲ್ತ್ ಕ್ರೀಡಾ ಕೂಟ ಸಂಘಟಿತವಾಗುತ್ತಿದೆ. ಆ ಕ್ರೀಡಾಕೂಟದಲ್ಲಿ ಇಂದಿನಿಂದಲೇ ಸಿದ್ಧರಾಗಬೇಕು’ ಎಂದು ಕರೆ ನೀಡಿದರು.
ಸಂಸದ ಖೇಲ್ ಮಹೋತ್ಸವದ ತಾಲ್ಲೂಕು ಸಂಚಾಲಕ ನವೀನ ಶೆಟ್ಟಿ ಚಿಪಗಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಕ್ಷೇತ್ರದ ಯುವಕರಲ್ಲಿ ಕ್ರೀಡಾ ಪ್ರತಿಭೆಯನ್ನು ಉತ್ತೇಜಿಸಲು ಕ್ರೀಡಾಕೂಟವನ್ನು ಸಂಘಟಿಸಲಾಗಿದೆ’ ಎಂದರು.
ಉದ್ಯಮಿ ಶ್ರೀನಿವಾಸ ಹೆಬ್ಬಾರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ಶಿರಸಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಬನವಾಸಿ ಮಂಡಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮಕುಮಾರ ನಾಯ್ಕ, ಪ್ರಮುಖರಾದ ಅನಂತಮೂರ್ತಿ ಹೆಗಡೆ, ರಮಾಕಾಂತ ಭಟ್, ಸದಾನಂದ ಭಟ್, ನಾಗರಾಜ ನಾಯ್ಕ, ರಾಘವೇಂದ್ರ ಶೆಟ್ಟಿ, ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ಕಿರಣಕುಮಾರ ನಾಯ್ಕ, ಪರಿವೀಕ್ಷಕ ಬಿ.ವಿ.ಗಣೇಶ, ನಗರ ಪ್ರಾಥಮಿಕ ಕೇಂದ್ರ ವೈದ್ಯಾಧಿಕಾರಿ ಡಾ.ಭಾರತಿ ಹೊಸ್ಮನೆ ಇದ್ದರು. ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.