ADVERTISEMENT

ಶಾಲಾ ಕಟ್ಟಡ ದುರಸ್ತಿಗೆ ಅನುದಾನ ನೀಡಿ

ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ: ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 11:27 IST
Last Updated 18 ಜನವರಿ 2019, 11:27 IST
ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೊಗೇರ ಅವರ ಅಧ್ಯಕ್ಷತೆಯಲ್ಲಿ ಕಾರವಾರದಲ್ಲಿ ಶುಕ್ರವಾರ ಜಿ.ಪಂ.ಸಾಮಾನ್ಯ ಸಭೆ ನಡೆಯಿತು. ಸಿಇಒ ಮೊಹಮ್ಮದ್ ರೋಶನ್ ಚಿತ್ರದಲ್ಲಿದ್ದಾರೆ.
ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೊಗೇರ ಅವರ ಅಧ್ಯಕ್ಷತೆಯಲ್ಲಿ ಕಾರವಾರದಲ್ಲಿ ಶುಕ್ರವಾರ ಜಿ.ಪಂ.ಸಾಮಾನ್ಯ ಸಭೆ ನಡೆಯಿತು. ಸಿಇಒ ಮೊಹಮ್ಮದ್ ರೋಶನ್ ಚಿತ್ರದಲ್ಲಿದ್ದಾರೆ.   

ಕಾರವಾರ:ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡಗಳಿಗೆ ಹೊಸ ಕೊಠಡಿಗಳನ್ನು ನಿರ್ಮಿಸಲು ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ಒತ್ತಾಯಿಸಿದ್ದಾರೆ.

ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಶಿವಾನಂದ ಹೆಗಡೆ ಈ ವಿಚಾರ ಪ್ರಸ್ತಾಪಿಸಿದಾಗ ಹಲವು ಸದಸ್ಯರು ಧ್ವನಿಗೂಡಿಸಿದರು.

ವಿವಿಧ ಸರ್ಕಾರಿ ಶಾಲೆಗಳ ಚಾವಣಿ, ಬೆಂಚು, ಡೆಸ್ಕ್ ಸರಿಯಿಲ್ಲ. ಮಣ್ಣಿನ ಗೋಡೆಗಳು ಸಾಕಷ್ಟಿವೆ. ಅವುಗಳ ದುರಸ್ತಿಗೆ ಜಿಲ್ಲಾ ಪಂಚಾಯ್ತಿಯಲ್ಲಿ ಹಣವಿಲ್ಲಎಂದು ಅವರು ಹೇಳಿದರು.

ADVERTISEMENT

ಕಾರವಾರ ಡಿಡಿಪಿಐ ಎನ್.ಜಿ.ನಾಯ್ಕ ಮಾತನಾಡಿ, ‘ವಿವಿಧ ಶಾಲೆಗಳಿಗೆ 187 ಹೊಸ ಕೊಠಡಿಗಳ ಅಗತ್ಯವಿದ್ದು, 41 ಮಾತ್ರ ಮಂಜೂರಾಗಿವೆ. 100 ವರ್ಷ ಪೂರೈಸಿದ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು, ಅವುಗಳಿಗೆ ಅಗತ್ಯ ಸೌಕರ್ಯಗಳ ಬಗ್ಗೆಯೂ ಇಲಾಖೆಗೆ ತಿಳಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಶಿರಸಿ ಡಿಡಿಪಿಐಸಿ.ಎಸ್.ನಾಯ್ಕ, ಜಿಲ್ಲೆಯ ವಿವಿಧ ಶಾಲೆಗಳಲ್ಲಿ 232 ಮಣ್ಣಿನ ಗೋಡೆಯ ಕೊಠಡಿಗಳಿವೆ ಎಂದು ಗಮನಕ್ಕೆ ತಂದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರೋಶನ್, ಈ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.

ಸೈಕಲ್ ಗುಣಮಟ್ಟವಿಲ್ಲ: ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ಸೈಕಲ್‌ಗಳುಗುಣಮಟ್ಟವಿಲ್ಲ. ಈಗಲೇ ತುಕ್ಕು ಹಿಡಿದಿವೆ ಎಂದು ಸದಸ್ಯ ಗಜಾನನ ಪೈ ದೂರಿದರು.ಇದಕ್ಕೆ ಪ್ರತಿಕ್ರಿಯಿಸಿದಶಿರಸಿ ಡಿಡಿಪಿಐ ಸಿ.ಎಸ್.ನಾಯ್ಕ, ಸೈಕಲ್‌ಗಳ ವಿತರಣೆಗೆ ಸರ್ಕಾರದಿಂದ ಗುರುವಾರ ಆದೇಶ ಬಂದಿದೆ ಎಂದರು. ಸಿಇಒ ಎಂ.ರೋಶನ್ ಮಾತನಾಡಿ, ‘ಸೈಕಲ್ ಗುಣಮಟ್ಟದ ಬಗ್ಗೆ ಸರ್ಕಾರದಿಂದಲೇ ತನಿಖೆಯಾಗುತ್ತಿದೆ. ಒಂದುವೇಳೆ ಜಿಲ್ಲೆಯಲ್ಲೂ ಗುಣಮಟ್ಟದ ಬಗ್ಗೆ ಆಕ್ಷೇಪವಿದ್ದರೆ ವಿತರಣೆ ತಡೆಯಿರಿ’ಎಂದು ಸಲಹೆ ನೀಡಿದರು.

ಜಿಲ್ಲಾ ಗ್ರಾಮೀಣ ರಸ್ತೆ ಯೋಜನೆ (ಡಿಆರ್‌ಆರ್‌ಪಿ) ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ ಎಂದು ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಆರೋಪಿಸಿದರು. ಈ ಬಗ್ಗೆ ಅರಣ್ಯಾಧಿಕಾರಿಗಳ ಜತೆ ಸಭೆ ನಡೆಸುವುದಾಗಿ ರೋಶನ್ ಭರವಸೆ ನೀಡಿದರು.

‘ಮುಖ್ಯಶಿಕ್ಷಕರಿಗೆ ಶೋಕಾಸ್ ನೋಟಿಸ್’: ‘ಶಿರವಾಡ ಪ್ರೌಢಶಾಲೆಯ ಮುಖ್ಯಶಿಕ್ಷಕರು ಶಾಲೆಯ ಶೌಚಾಲಯವನ್ನು ಮಕ್ಕಳಿಂದಲೇ ಶುಚಿಗೊಳಿಸುತ್ತಾರೆ. ಬಾಲಕಿಯರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಯಾರಿಗಾದರೂ ದೂರು ನೀಡಿದರೆ ವರ್ಗಾವಣೆ ಪತ್ರದಲ್ಲಿ ಕೆಂಪು ಶಾಯಿಯಿಂದ ಗುರುತು ಮಾಡಿ ಕಳುಹಿಸುವುದಾಗಿ ಬೆದರಿಸುತ್ತಾರೆ’ ಎಂದು ಸದಸ್ಯೆ ಚೈತ್ರಾ ಕೊಠಾರಕರ ಸಭೆಯ ಗಮನಕ್ಕೆ ತಂದರು.

‘ನಾಲ್ಕೈದು ತಿಂಗಳಿನಿಂದ ಈ ಶಾಲೆಯ ಶಿಕ್ಷಕರಿಗೆ ವೇತನವೂ ಆಗಿಲ್ಲ. ಇಷ್ಟೆಲ್ಲ ಯಾಕೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.

ಇಒ ರೋಶನ್ ಮಾತನಾಡಿ, ‘ಮುಖ್ಯಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಿ. ಮೂರು ದಿನಗಳಲ್ಲಿ ಉತ್ತರಿಸದಿದ್ದರೆ ಅಮಾನತು ಮಾಡಿ. ಕೂಡಲೇ ಆ ಶಾಲೆಗೆ ಪ್ರಭಾರಿ ಮುಖ್ಯಶಿಕ್ಷಕರನ್ನು ನಿಯೋಜಿಸಿ, ಶಿಕ್ಷಕರಿಗೆ ವೇತನ ಕೊಡಿಸಿ’ ಎಂದು ಡಿಡಿಪಿಐಗೆ ಸೂಚಿಸಿದರು.

‘ಜನೌಷಧ ಮಳಿಗೆಯಲ್ಲಿ ಔಷಧ ಸಿಗುತ್ತಿಲ್ಲ’: ಶಿರಸಿಯಲ್ಲಿ ಆರಂಭಿಸಲಾಗಿರುವ ಜನೌಷಧ ಮಳಿಗೆಯಲ್ಲಿ ಅಗತ್ಯ ಔಷಧ ಲಭಿಸುತ್ತಿಲ್ಲ. ವೈದ್ಯರೂ ಖಾಸಗಿ ಮೆಡಿಕಲ್‌ಗಳಿಂದ ಔಷಧ ಖರೀದಿಸಲು ಶಿಫಾರಸು ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಬಸವರಾಜ ದೊಡ್ಮನಿ ಆಗ್ರಹಿಸಿದರು. ಇದಕ್ಕೆ ಸದಸ್ಯೆ ಉಷಾ ಹೆಗಡೆ ಧ್ವನಿಗೂಡಿಸಿ, ಅಲ್ಲಿರುವ ಸಿಬ್ಬಂದಿಗೆ ವೇತನ ಕೊಡಲೂ ಸಮಸ್ಯೆಯಾಗ್ತಿದೆ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಎನ್.ಅಶೋಕ್ ಕುಮಾರ್, ಸರ್ಕಾರಿ ಆಸ್ಪತ್ರೆಗಳ ಎಲ್ಲ ವೈದ್ಯರಿಗೂ ರೋಗಿಗಳಿಗೆ ಜನರಿಕ್ ಔಷಧಿಯನ್ನೇ ನೀಡುವಂತೆ ಸೂಚಿಸುವ ಭರವಸೆ ನೀಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತ್ನಾಕರ ನಾಯ್ಕ, ಜಯಮ್ಮ ಕೃಷ್ಣ ಹಿರೇಕೈ, ಸಂಜಯ್ ಹಣಬರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.