ಹೊಸಪೇಟೆ : ತುಂಗಭದ್ರಾ ನದಿಯ ಒಳಹರಿವಿನಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಕಾರಣ ಶನಿವಾರ ಅಣೆಕಟ್ಟೆಯ 26 ಕ್ರಸ್ಟ್‌ಗೇಟ್‌ಗಳನ್ನು ತೆರೆದು 77 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಯಿತು.
ತುಂಗಾ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ಮತ್ತು ಭದ್ರಾ ಜಲಾಶಯದಿಂದ 19,427 ಕ್ಯೂಸೆಕ್ ನೀರು ಹೊರಬಿಡುತ್ತಿರುವುದರಿಂದ ಹಾಗೂ ವರದಾ ನದಿಯಿಂದಲೂ ನೀರು ಹರಿದು ಬರುತ್ತಿರುವುದರಿಂದ ತುಂಗಭದ್ರಾ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಿತ್ತು. ಜಲಾಶಯದಲ್ಲಿ 80 ಟಿಎಂಸಿ ಅಡಿಯಷ್ಟು ನೀರನ್ನು ಮಾತ್ರ ಸಂಗ್ರಹಿಸಿ ಇಟ್ಟುಕೊಳ್ಳುವ ತುರ್ತು ಇದ್ದ ಕಾರಣ ತುಂಗಭದ್ರಾ ಮಂಡಳಿ ತುರ್ತು ಪ್ರಕಟಣೆ ಹೊರಡಿಸಿ ಶನಿವಾರ ಮಧ್ಯಾಹ್ನದ ವೇಳೆಗೆ 26 ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಟ್ಟಿತು.
ತುಂಗಭದ್ರಾ ಅಣೆಕಟ್ಟೆಯಿಂದ 24 ದಿನಗಳಿಂದೀಚೆಗೆ ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಹರಿಯುತ್ತಲೇ ಇದೆ. ಜುಲೈ ಮೊದಲೆರಡು ವಾರ ಒಳಹರಿವು ಪ್ರಮಾಣ 40 ಸಾವಿರ ಕ್ಯೂಸೆಕ್‌ಗಿಂತ ಅಧಿಕ ಇತ್ತು. ಜುಲೈ 5ರಂದು 64 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು. ಬಳಿಕ ಒಳಹರಿವಿನ ಪ್ರಮಾಣದಲ್ಲಿ ಇಳಿಕೆಯಾಗುತ್ತ ಬಂದ ಕಾರಣ ಹೊರಹರಿವಿನ ಪ್ರಮಾಣವನ್ನೂ ಇಳಿಸಲಾಗಿತ್ತು.
80 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹ: ತುಂಗಭದ್ರಾ ಜಲಾಶಯದ ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಅಡಿ. ಆದರೆ ಅಣೆಕಟ್ಟೆಯ ಕ್ರಸ್ಟ್‌ಗೇಟ್‌ಗಳು ಶಿಥಿಲಗೊಂಡಿರುವ ಕಾರಣ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಜಲಾಶಯದಲ್ಲಿ ನೀರು ಸಂಗ್ರಹ ಮಾಡುವುದು ಬೇಡ ಎಂದು ತಜ್ಞರು ಸಲಹೆ ನೀಡಿದ್ದರು. ಗರಿಷ್ಠ 80 ಟಿಎಂಸಿ ಅಡಿಗೇ ಮಿತಿಗೊಳಿಸಿ ಉಳಿದ ನೀರನ್ನು ನದಿಗೆ ಹರಿಸಬೇಕು ಎಂಬ ತಜ್ಞರ ಸಲಹೆಯಂತೆ ಜುಲೈ 1ರಿಂದಲೇ ನದಿಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ ಕಳೆದ 25 ದಿನಗಳಿಂದ ಸತತವಾಗಿ ನೀರು ಅಣೆಕಟ್ಟೆಯಿಂದ ನದಿಗೆ ಹರಿಯುತ್ತಲೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.