ADVERTISEMENT

21 ಗೇಟ್‌ ಮೂಲಕ 65 ಸಾವಿರ ಕ್ಯೂಸೆಕ್‌ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:10 IST
Last Updated 4 ಜುಲೈ 2025, 13:10 IST
   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯಕ್ಕೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಭಾರಿ ಹೆಚ್ಚು, ಕಡಿಮೆ ಆಗುತ್ತಲೇ ಇದ್ದು, ಶುಕ್ರವಾರ ಸಂಜೆ 53,144 ಕ್ಯೂಸೆಕ್‌ಗೆ ಹೆಚ್ಚಳವಾಗಿದೆ. ಹೀಗಾಗಿ 21 ಗೇಟ್‌ಗಳನ್ನು ತೆರೆದು ನದಿಗೆ 59,220 ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಯಿತು.

ಎಡದಂತೆ ಕಾಲುವೆಗೆ ಹರಿಸುವ ನೀರು, ವಿದ್ಯುದಾಗಾರ ಮೂಲಕ ಹೊರಬರುವ ನೀರನ್ನು ಒಟ್ಟು ಸೇರಿಸಿದರೆ ಅಣೆಕಟ್ಟೆಯಿಂದ ಒಟ್ಟು 65.852 ಕ್ಯೂಸೆಕ್‌ ನೀರು ಹೊರಬರುತ್ತಿದೆ.

ಶುಕ್ರವಾರ ಬೆಳಿಗ್ಗೆ ಒಳಹರಿವಿನ ಪ್ರಮಾಣ 35,052 ಕ್ಯೂಸೆಕ್‌ನಷ್ಟಿತ್ತು. ಮಧ್ಯಾಹ್ನವ ವೇಳೆಗೆ ಅದರ ಪ್ರಮಾಣ ಹೆಚ್ಚಳವಾಯಿತು.

ADVERTISEMENT

ನೀರು ವ್ಯರ್ಥ: ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಕ್ರೆಸ್ಟ್‌ಗೇಟ್‌ಗಳನ್ನು ಬದಲಿಸಬೇಕು ಎಂಬ ತಜ್ಞರ ವರದಿ ಬಂದು ಆರೇಳು ತಿಂಗಳು ಕಳೆದಿದ್ದರೂ, ಹೊಸ ಗೇಟ್ ಅಳವಡಿಕೆ ಆಗಿಲ್ಲ. ಹೀಗಾಗಿ ಈ ಬಾರಿ 80 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಿಸಿ ಮಿಕ್ಕ ನೀರನ್ನು ನದಿಗೆ ಬಿಡುವುದು ಅನಿವಾರ್ಯವಾಗಿದೆ. ಹೀಗಾಗಿ ಈ ಬಾರಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿ ಹೋಗುವುದನ್ನು ತಪ್ಪಿಸಲು ಬೇರೆ ದಾರಿಯೇ ಇಲ್ಲವಾಗಿದೆ.

ಬಣ್ಣದ ಚಿತ್ತಾರ: ಗುರುವಾರ 20 ಗೇಟ್‌ಗಳನ್ನು ತೆರೆದು ಅಣೆಕಟ್ಟೆಯಿಂದ ನೀರು ಹೊರಬಿಡಲಾಗಿತ್ತು. ರಾತ್ರಿ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನೂ ಉರಿಸಲಾಗಿತ್ತು. ಇದರಿಂದ ಅಣೆಕಟ್ಟೆ ಮತ್ತು ಬಿಳ್ನೊರೆಯಾಗಿ ಹರಿಯುವ ನೀರಿನ ದೃಶ್ಯ ಮನೋಹರವಾಗಿ ಕಾಣಿಸಿತ್ತು. ಅಧಿಕ ಗೇಟ್‌ ತೆರೆದು ನೀರು ಬಿಟ್ಟಾಗಲೆಲ್ಲಾ ಹೀಗೆ ದೀಪ ಉರಿಸುವ ವ್ಯವಸ್ಥೆ ಮುಂದುವರಿಯುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.