ADVERTISEMENT

‘ಅಂಬಾರಿ’ ಪ್ರಾಯೋಗಿಕ ಸಂಚಾರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 16:38 IST
Last Updated 30 ಜೂನ್ 2022, 16:38 IST
ಹೊಸಪೇಟೆಯಿಂದ ಕಮಲಾಪುರದ ವರೆಗೆ ಗುರುವಾರ ‘ಅಂಬಾರಿ‘ ಪ್ರಾಯೋಗಿಕ ಸಂಚಾರ ಬೆಳೆಸಿತು
ಹೊಸಪೇಟೆಯಿಂದ ಕಮಲಾಪುರದ ವರೆಗೆ ಗುರುವಾರ ‘ಅಂಬಾರಿ‘ ಪ್ರಾಯೋಗಿಕ ಸಂಚಾರ ಬೆಳೆಸಿತು   

ಹೊಸಪೇಟೆ (ವಿಜಯನಗರ): ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಸೇರಿದ ‘ಅಂಬಾರಿ’ ಬಸ್‌ ಸಂಚಾರದ ಸಾಧಕ ಬಾಧಕಗಳ ಪರಿಶೀಲನೆಗೆ ಬುಧವಾರ ಪ್ರಾಯೋಗಿಕ ಸಂಚಾರ ನಡೆಸಲಾಯಿತು.

ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಅವರನ್ನು ಒಳಗೊಂಡ ಸಮಿತಿಯ ಸದಸ್ಯರು ‘ಅಂಬಾರಿ’ಯಲ್ಲಿ ಪಯಣಿಸಿ, ಅಧ್ಯಯನ ನಡೆಸಿದರು. ಟಿ.ಬಿ. ಡ್ಯಾಂ ವೃತ್ತದಲ್ಲಿನ ಪ್ರವಾಸೋದ್ಯಮ ನಿಗಮದ ಕಚೇರಿಯಿಂದ ಪ್ರಯಾಣ ಬೆಳೆಸಿದ ‘ಅಂಬಾರಿ’, ಸಂಡೂರು ಬೈಪಾಸ್‌, ಬಳ್ಳಾರಿ ರಸ್ತೆ ಮೂಲಕ ಪಾಪಿನಾಯಕನಹಳ್ಳಿ ಮಾರ್ಗದಿಂದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಎದುರಿನಿಂದ ಕಮಲಾಪುರದ ಚರ್ಚ್‌ ಬಳಿಯಿರುವ ತುಂಗಭದ್ರಾ ಕೆಳಮಟ್ಟದ ಕಾಲುವೆಯ ವರೆಗೆ ಸಂಚಾರ ಬೆಳೆಸಿತು. ಕಾಲುವೆಯ ಬಳಿ ವಿದ್ಯುತ್‌ ತಂತಿಗಳು ತೀರ ಕೆಳಭಾಗದಲ್ಲಿ ಇದ್ದದ್ದರಿಂದ ಮುಂದೆ ಸಂಚರಿಸಲಿಲ್ಲ. ಅಲ್ಲಿ ಅಧಿಕಾರಿಗಳು ಕೆಳಗಿಳಿದು ಅನ್ಯ ವಾಹನಗಳ ಮೂಲಕ ಕಮಲಾಪುರಕ್ಕೆ ತೆರಳಿದರು.

‘ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರ ಸೂಚನೆಯ ಮೇರೆಗೆ ‘ಅಂಬಾರಿ’ ಸಂಚಾರಕ್ಕೆ ಸಂಬಂಧಿಸಿದಂತೆ ಸಾಧಕ ಬಾಧಕಗಳ ಅಧ್ಯಯನ ನಡೆಸಲಾಯಿತು. ಅನೇಕ ಕಡೆಗಳಲ್ಲಿ ವಿದ್ಯುತ್‌ ಕಂಬಗಳು, ತಂತಿಗಳು ಕೆಳಭಾಗದಲ್ಲಿರುವುದು ಗಮನಕ್ಕೆ ಬಂದಿದೆ. ಕೆಲವೆಡೆ ರೆಂಬೆ, ಕೊಂಬೆಗಳು ಸುಗಮ ಸಂಚಾರಕ್ಕೆ ತೊಡಕಾಗಿವೆ. ಇನ್ನು, ಕಮಲಾಪುರದ ಕಾಲುವೆ ಬಳಿ ವಿದ್ಯುತ್‌ ತಂತಿಗಳು ಬಹಳ ಕೆಳಭಾಗದಲ್ಲಿವೆ. ಇದರ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳುವರು’ ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾದ ವಲಯ ಅರಣ್ಯ ಅಧಿಕಾರಿ ಕೆ.ಸಿ. ವಿನಯ್‌ಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ಹಂಚಿಕೊಂಡರು.

ADVERTISEMENT

ಜೆಸ್ಕಾಂ ಎಂಜಿನಿಯರ್‌ ಉಮೇಶ್‌, ಆರ್‌ಟಿಒ ಇನ್‌ಸ್ಪೆಕ್ಟರ್‌ ಸಂದೀಪ್‌ ಇದ್ದರು. ‘ಅಂಬಾರಿ’ ಏಳೆಂಟು ತಿಂಗಳ ಹಿಂದೆಯೇ ಜಿಲ್ಲೆಗೆ ಬಂದಿದೆ. ಆದರೆ, ಇದುವರೆಗೆ ಸಾರ್ವಜನಿಕ ಸೇವೆಗೆ ಮುಕ್ತಗೊಂಡಿಲ್ಲ. ಬಸ್‌ನಂತಿರುವ ಅಂಬಾರಿಯ ಕೆಳಭಾಗ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ. ಮೇಲ್ಭಾಗ ಸಂಪೂರ್ಣ ತೆರೆದ ಸ್ಥಿತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.