ಹೊಸಪೇಟೆ (ವಿಜಯನಗರ): ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕೆಂಬ ಬೇಡಿಕೆ ಬಹಳ ವರ್ಷಗಳದ್ದು, ನಿವೇಶನ ಅಂತಿಮಗೊಳಿಸಿ ಶೀಘ್ರ ಅದನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಭರವಸೆ ನೀಡಿದರು.
ಇಲ್ಲಿನ ಅಂಬೇಡ್ಕರ್ ವೃತ್ತದ ಬಳಿ ಸೋಮವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್‌ರಾಂ ಅವರ 118ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾನತೆ, ಶಾಂತಿ, ಮಹಿಳೆಯರ ಅಭಿವೃದ್ಧಿ, ಭ್ರಾತೃತ್ವ, ಶಿಕ್ಷಣಕ್ಕೆ ಪ್ರೋತ್ಸಾಹ ಯಾವ ಸಮಾಜದಲ್ಲಿ ಇದೆಯೋ ಅದೇ ನಿಜವಾದ ಧರ್ಮ, ಅದೊಂದೆ ಮಾನವ ಧರ್ಮ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಂದೇಶ ನೀಡಿದ್ದಾರೆ, ಅದನ್ನು ನಾವು ಅನುಸರಿಸಬೇಕಾಗಿದೆ’ ಎಂದರು.
‘ರಕ್ತದಾನ, ಆರೋಗ್ಯ ಸೇವೆಗಳಿಂದ ಅಂಬೇಡ್ಕರ್ ಜಯಂತಿ ಶ್ರೇಷ್ಠತೆ ಪಡೆಯಲಿದೆ. ಅಂದು ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಸಮ ಸಮಾಜದ ಕನಸು ನನಸಾಗಿ ದೇಶದ ಗೌರವ ಹೆಚ್ಚಾಗಿದೆ. ಜಾಗತಿಕ ಮನ್ನಣೆ ಪಡೆದ ಏಕೈಕ ಸಂವಿಧಾನ ಭಾರತದ್ದಾಗಿದೆ. ಅಂಬೇಡ್ಕರ ನೀಡಿದ ಸಂವಿಧಾನದಿಂದಾಗಿ ಇಂದಿಗೂ ಮಾನವನ ಕಲ್ಯಾಣ ಸಾಧ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ಮಾತನಾಡಿ, ಅಂಬೇಡ್ಕರ್ ಅಸಮಾನತೆ ವಿರುದ್ಧ ಹೋರಾಟ ಆರಂಭಿಸಿ, ಇಡೀ ದೇಶಕ್ಕೆ ಸಮಾನತೆಯನ್ನು ಒದಗಿಸುವ ಸಂವಿಧಾನವನ್ನು ಕೊಡುಗೆಯನ್ನಾಗಿ ನೀಡಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀಹರಿಬಾಬು.ಬಿ.ಎಲ್. ಮಾತನಾಡಿ, ಅಂಬೇಡ್ಕರ್ ಅವರು 1920ರಲ್ಲೇ ‘ಮೂಕನಾಯಕ’ ಎಂಬ ಪತ್ರಿಕೆಯನ್ನು ಆರಂಭಿಸಿ ಜನರಿಗೆ ಜಾಗೃತಿ ಮೂಡಿಸಲು ಹರಸಾಹಸ ಪಟ್ಟಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟಗಳ ಮಹತ್ವವನ್ನು ಸಾರಿದ್ದಾರೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಕುರಿತು ರಾಜಕುಮಾರ ಹಾಗೂ ಡಾ.ಜಗಜೀವನ್‌ರಾಂ ಕುರಿತು ತಿಪ್ಪೇಸ್ವಾಮಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಸಂವಿಧಾನದ ಪಿಠೀಕೆಯನ್ನು ವಾಚನ ಮಾಡಲಾಯಿತು.
ಇದಕ್ಕೂ ಮೊದಲು ಹಂಪಿಯ ವಿರೂಪಾಕ್ಷ ದೇಗುಲದಿಂದ ಯುವಕರು ಜ್ಯೋತಿಯನ್ನು ಮೆರವಣಿಗೆಯಲ್ಲಿ ತಂದು ನಗರದ ಬಳ್ಳಾರಿ ವೃತ್ತದಲ್ಲಿನ ಅಂಬೇಡ್ಕರ್ ಪುತ್ಥಳಿಯಲ್ಲಿ ಜ್ಯೋತಿ ಬೆಳಗಲಾಯಿತು . ಶಾಸಕ ಎಚ್.ಆರ್.ಗವಿಯಪ್ಪ ಅವರು ಅಲ್ಲಿ ಅಂಬೇಡ್ಕರ್ ಮತ್ತು ಬಾಬೂಜಿ ಅವರ ಭಾವಚಿತ್ರವನ್ನು ಹೊತ್ತ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಈ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜೈಭೀಮ್ ವೃತ್ತ ತಲುಪಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ಎಂ ಶ್ರುತಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ.ಉಮಾಪತಿ, ಗೌರವಾಧ್ಯಕ್ಷ ವೀರಸ್ವಾಮಿ, ನಗರಸಭೆ ಪೌರಯುಕ್ತ ಚಂದ್ರಪ್ಪ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.