ಹೊಸಪೇಟೆ (ವಿಜಯನಗರ): ಕುಡಿದು ಬರುವ ತಂದೆ, ಗಾಂಜಾ ಸೇವಿಸಿ ಬರುವ ಅಣ್ಣನನ್ನು ಪ್ರೀತಿಯ ಮಾತುಗಳಿಂದಲೇ ತಿದ್ದುವುದು ಮಕ್ಕಳಿಂದ ಸಾಧ್ಯವಿದೆ. ಜಾಗ ವ್ಯಸನಮುಕ್ತವಲ್ಲ, ಜನ ವ್ಯಸನಮುಕ್ತವಾಗಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆಯು ನಗರಸಭೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಕುಡಿಯದವರು, ಇಸ್ಟೀಟ್ ಆಡದವರು ಇಲ್ಲಿ ಸೇರಿದ್ದೀರಿ. ಆದರೆ ನಿಮಗೆಲ್ಲರಿಗೂ ನಿಮ್ಮ ಮನೆಯಲ್ಲಿ, ಸುತ್ತಮುತ್ತಲಲ್ಲಿ ಜನ ಕೆಟ್ಟ ಚಟ ಅಂಟಿಸಿಕೊಂಡಿದ್ದನ್ನು ನಿಮ್ಮ ಪ್ರೀತಿಯ ಮಾತುಗಳಿಂದಲೇ ಬಿಡಿಸಲು ಸಾಧ್ಯವಿದೆ. ಮನೆಗೆ ಕುಡಿದು ಬರುವ, ಗುಟ್ಕಾ ಸೇವಿಸಿ ಬರುವವರನ್ನು ಕೈಮುಗಿದು ಬೇಡಿಕೊಳ್ಳಿ, ಅವರ ಮನಸ್ಸು ಕರಗುವುದು ಸಾಧ್ಯವಿದೆ. ಇಂತಹ ಉತ್ತಮ ಸಂದೇಶವನ್ನು ನೀವೆಲ್ಲ ಇಲ್ಲಿಂದ ತೆಗೆದುಕೊಂಡು ಮನೆಗೆ ಹೋಗಬೇಕು’ ಎಂದು ಶ್ರಿಗಳು ಸೂಚಿಸಿದರು.
ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬನ ಕಥೆಯನ್ನು ಹೇಳಿದ ಶ್ರೀಗಳು, ಮನೆಯಲ್ಲಿ ಅಪ್ಪಂದಿರು ಕುಡಿಯುವ ಚಟ ಅಂಟಿಸಿಕೊಂಡು ಮನೆ ಮಂದಿಯನ್ನು ಬೀದಿ ಪಾಲು ಮಾಡಿದ್ದಕ್ಕೇ ತಾನು ಇಲ್ಲಿ ಕೆಲಸಕ್ಕೆ ಬರಬೇಕಾಯಿತು ಎಂದು ಆ ಬಾಲಕ ಹೇಳಿದ್ದರ ಅರ್ಥವನ್ನು ಸೂಕ್ಷ್ಮವಾಗಿ ತಿಳಿಸಿಕೊಟ್ಟರು.
ನಟ ಅಜಯ್ ರಾವ್ ಮಾತನಾಡಿ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗದು, ವಿದ್ಯಾರ್ಥಿ ಜೀವನದಲ್ಲೇ ಕೆಟ್ಟ ಹವ್ಯಾಸದಿಂದ ದೂರ ಉಳಿದರೆ ಜೀವನದಲ್ಲಿ ಮಹತ್ವದ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಿದ್ಯಾರ್ಥಿಗಳು ಬೇಗ ಅರ್ಥ ಮಾಡಿಕೊಂಡಷ್ಟೂ ಉತ್ತಮ ಎಂದ ಅವರು, ‘ಖುಷಿಯಾಗಿದೆ ಮನಸು... ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಂ ಕಂ...’ ಹಾಡುಗಳನ್ನು ಹಾಡಿ ರಂಜಿಸಿದರು.
ಹಗರಿಬೊಮ್ಮನಹಳ್ಳಿಯ ರಂಗಲೋಕ ಕಲಾ ಸಂಸ್ಥೆಯ ಕಲಾವಿದರು ನಾಟಕದ ಮೂಲಕ ಹಾಗೂ ಕಲಾವಿದ ಜೋಗಿ ತಾಯಪ್ಪ ಅವರು ಕಿರು ಚಿತ್ರ ಪ್ರದರ್ಶನದ ಮೂಲಕ ಮಾದಕ ವಸ್ತುಗಳ ಅಪಾಯದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಾಗರಾಜ ಹವಾಲ್ದಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ, ಡ್ರಗ್ಸ್ ನಿಯಂತ್ರಣಾಧಿಕಾರಿ ಜಿ.ವಿ.ನಾರಾಯಣ ರೆಡ್ಡಿ, ಪ್ರಕಾಶ ಶಾನುಬಾಗ್, ಡಿವೈಎಸ್ಪಿ ಮಂಜುನಾಥ ಇತರರು ಇದ್ದರು.
ಹವ್ಯಾಸ ನಮ್ಮ ಚಾರಿತ್ರ್ಯ ರೂಪಿಸುತ್ತದೆ ಚಾರಿತ್ರ್ಯ ನಮ್ಮ ಸ್ವಭಾವ ರೂಪಿಸುತ್ತದೆ. ಸ್ವಬಾವ ನಮ್ಮ ಭವಿಷ್ಯವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ವ್ಯವಸದ ದಾಸರಾಗದೆ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕುಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಗವಿಮಠ ಕೊಪ್ಪಳ
112ಕ್ಕೆ ಕರೆ ಮಾಡಿ
ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್. ಮಾತನಾಡಿ ವಿದ್ಯಾರ್ಥಿಗಳು ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲಲ್ಲಿ ನಡೆಯುವ ಗಾಂಜಾ ಸೇವನೆ ಅಕ್ರಮ ಮದ್ಯ ಮಾರಾಟದಂತಹ ಕೃತ್ಯಗಳ ಕುರಿತಂತೆ 112ಕ್ಕೆ ಕರೆ ಮಾಡಿ ತಿಳಿಸಬೇಕು ಕರೆ ಮಾಡಿದವರ ಗುರುತನ್ನು ಗೋಪ್ಯವಾಗಿ ಇಡಲಾಗುವುದು. ಇದು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ನೀವು ಮಾಡಬಹುದಾದ ಬಹುದೊಡ್ಡ ಕೊಡುಗೆ ಆಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.