ADVERTISEMENT

ಬಯಲಾಟ ಅಕಾಡೆಮಿಗೆ ಕಾಯಕಲ್ಪ ಅಗತ್ಯ: ಕಾಳೇನಹಳ್ಳಿ ಚಂದ್ರು

ಹರಪನಹಳ್ಳಿಯಲ್ಲಿ ರಾಜ್ಯಮಟ್ಟದ ಬಯಲಾಟ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 14:15 IST
Last Updated 18 ಏಪ್ರಿಲ್ 2025, 14:15 IST
ಹರಪನಹಳ್ಳಿಯಲ್ಲಿ ಬಯಲಾಟ ಅಕಾಡೆಮಿಯಿಂದ ಜರುಗಿದ ‘ಬಯಲಾಟ ಸಂಭ್ರಮ’ಕ್ಕೆ ಗಣ್ಯರು ಚಾಲನೆ ನೀಡಿದರು
ಹರಪನಹಳ್ಳಿಯಲ್ಲಿ ಬಯಲಾಟ ಅಕಾಡೆಮಿಯಿಂದ ಜರುಗಿದ ‘ಬಯಲಾಟ ಸಂಭ್ರಮ’ಕ್ಕೆ ಗಣ್ಯರು ಚಾಲನೆ ನೀಡಿದರು   

ಹರಪನಹಳ್ಳಿ: ‘ಯಕ್ಷಗಾನಕ್ಕೆ‌ ಸಿಕ್ಕಷ್ಟು ಮಾನ್ಯತೆ ಬಯಲಾಟಕ್ಕೆ ಸಿಗುತ್ತಿಲ್ಲ.‌ ಬಯಲಾಟ ಅಕಾಡೆಮಿ ಕ್ರಿಯಾಶೀಲವಾಗಿದೆ. ಆದರೆ, ಅಕಾಡೆಮಿಗೆ ಕಾಯಕಲ್ಪದ ಅಗತ್ಯವಿದೆ’ ಎಂದು ಬಯಲಾಟ ಅಕಾಡೆಮಿ ಸದಸ್ಯ ಕಾಳೇನಹಳ್ಳಿ ಚಂದ್ರು ಅಭಿಪ್ರಾಯಪಟ್ಟರು.

ಬಾಗಲಕೋಟೆ ಕರ್ನಾಟಕ ಬಯಲಾಟ ಅಕಾಡೆಮಿ, ಸಮಸ್ತರು ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಬಯಲಾಟ ಸಂಭ್ರಮ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಬಯಲಾಟ ಅಳಿವಿನ ಅಂಚಿನಲ್ಲಿಲ್ಲ, ಅದು ಎಂದಿಗೂ ಅಳಿಯುವುದಿಲ್ಲ ಎಂದಿರುವ ವಿದ್ವಾಂಸರ ಮಾತು ಸತ್ಯವಾಗಿದೆ’ ಎಂದರು.

ಪ್ರಗತಿಪರ ಚಿಂತಕ‌ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ‘ದೇಶಿಯ ಆಟಗಳು ಕಣ್ಮರೆ ಆಗುವ ದಿನಗಳಲ್ಲಿ ಒಬ್ಬರಿಗೊಬ್ಬರು ನಂಬದ ಸ್ಥಿತಿಗೆ ಜಗತ್ತು ತಲುಪಿದೆ. ಸ್ಥಳೀಯ ಇತಿಹಾಸವನ್ನು ಬಯಲಾಟಕ್ಕೆ ರೂಪಾಂತರಗೊಳಿಸುವ ಮೂಲಕ ಸಾಂಸ್ಕೃತಿಕ ಪರಂಪರೆ ಉಳಿಸುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.

ADVERTISEMENT

‘ಸಮಾಜಮುಖಿ ಬಯಲಾಟ ಅಕಾಡೆಮಿ ಮತ್ತು ಕಲಾವಿದರು’ ಕುರಿತು ಚಿತ್ರದುರ್ಗ ಗುರುನಾಥ ಉಪನ್ಯಾಸ ನೀಡಿ, ‘ಬಯಲಾಟ ಕಲೆ ಮಕ್ಕಳಿಗೆ ಕಲಿಸಬೇಕು. ಕಲಾವಿದರಿಗೆ ನೈತಿಕ ಬೆಂಬಲದ ಅಗತ್ಯವಿದೆ’ ಎಂದರು.

ಬಯಲಾಟ ಹಿರಿಯ ಕಲಾವಿದ ಫಕ್ಕಿರೇಶ ಕೊಂಡಾಯಿ, ಬಯಲಾಟ ಅಕಾಡೆಮಿ ಸದಸ್ಯರಾದ ಸಂಚಾಲಕ ಬಿ.ಪರಶುರಾಮ, ಪಾಲಾಕ್ಷಯ್ಯ ಹೊಸಪೇಟೆ, ನಿಂಗಪ್ಪ ತೋರಣಗಟ್ಟಿ, ಸಂಡೂರು ಮಲ್ಲಯ್ಯ ಮಾತನಾಡಿದರು.

ಹುಲುಸೋಗಿ ಫಕ್ಕೀರೇಶ ಕೊಂಡಾಯಿ ತಂಡದಿಂದ ರಂಗ ಗೀತೆ, ಬಳ್ಳಾರಿ ಧಾತ್ರಿ ತಂಡದಿಂದ ರಾಮ–ರಾವಣ ಯುದ್ಧ, ಹಲುವಾಗಲು ತಂಡದಿಂದ ‘ಸೂತ್ರದ ಗೊಂಬೆ, ದುಶ್ಯಾಸನ ವಧೆ’ ಪ್ರಸಂಗಗಳು ಪ್ರೇಕ್ಷಕರ‌ ಮೆಚ್ಚುಗೆ ಪಡೆದವು.

ಅಕಾಡೆಮಿ ಪ್ರಶಸ್ತಿ ಪುರಸ್ಕತರಾದ ಚಿಕ್ಕನಕಲ್‌ ರಾಮಣ್ಣ, ರಾಮಚಂದ್ರಪ್ಪ, ಅಕಾಡೆಮಿ ರಿಜಿಸ್ಟ್ರಾರ್ ಕೆ.ಕರುಣಕುಮಾರ್, ರೈತ‌ ಮುಖಂಡ ವೀರಸಂಗಯ್ಯ, ದಾವಣಗೆರೆ ಕುಂಚ‌ ಕಲಾವಿದ ನಾ.ರೇವಣ್ಣ, ಸತ್ಯನಾರಾಯಣ, ಸುಭಾಷ್ ಚಂದ್ರಬೋಸ್, ಮಾರುತಿ, ಅರ್ಜುನ ಪರಸಪ್ಪ, ರಘು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.