ADVERTISEMENT

ಅಲ್ಪಸಂಖ್ಯಾತರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 9:47 IST
Last Updated 7 ಡಿಸೆಂಬರ್ 2021, 9:47 IST
ಸಿಪಿಐಎಂ ಕಾರ್ಯಕರ್ತರು ಮಂಗಳವಾರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದ ನಂತರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಸಿಪಿಐಎಂ ಕಾರ್ಯಕರ್ತರು ಮಂಗಳವಾರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದ ನಂತರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ದೇಶದಾದ್ಯಂತ ನಡೆಯುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ಖಂಡಿಸಿ ಸಿಪಿಐಎಂ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥೆಗಳು ದೇಶದ ವಿವಿಧ ರಾಜ್ಯಗಳಲ್ಲಿ ಕ್ರೈಸ್ತರು, ಮುಸ್ಲಿಮರ ಮೇಲೆ ವ್ಯವಸ್ಥಿತ ದಾಳಿ ನಡೆಸುತ್ತಿದ್ದಾರೆ. ಪ್ರಾರ್ಥನಾ ಸ್ಥಳಗಳು ಇದಕ್ಕೆ ಹೊರತಾಗಿಲ್ಲ. ಕೂಡಲೇ ಈ ದಾಳಿಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ, ಮುಖ್ಯಮಂತ್ರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ಗೋ ರಕ್ಷಣೆ, ಲವ್‌ ಜಿಹಾದ್‌ ಹೆಸರಿನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ. ಎಲ್ಲೆಡೆ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಇದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಕೋಮುದಳ್ಳುರಿಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಅಲ್ಪಸಂಖ್ಯಾತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ವಾಪಸ್‌ ಪಡೆಯಬೇಕು. ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಅಲ್ಪಸಂಖ್ಯಾತರ ಹಕ್ಕುಗಳು, ಸಮಸ್ಯೆಗಳ ಕುರಿತು ಸಂಸತ್ತು, ವಿಧಾನಸಭೆಯಲ್ಲಿ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್‌. ಭಾಸ್ಕರ್‌ ರೆಡ್ಡಿ, ಮುಖಂಡರಾದ ಮರಡಿ ಜಂಬಯ್ಯ ನಾಯಕ, ಎ. ಕರುಣಾನಿಧಿ, ವಿ. ಸ್ವಾಮಿ, ಕೆ. ನಾಗರತ್ನಮ್ಮ, ಎಂ. ಗೋಪಾಲ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.