ADVERTISEMENT

ಹತ್ತಿ ಬೆಳೆ ಬಿತ್ತನೆಗೆ ಬೇಸಿಗೆ ಸಕಾಲವಲ್ಲ: ಮುದ್ಗಲ್‌

​ಪ್ರಜಾವಾಣಿ ವಾರ್ತೆ
Published 9 ಮೇ 2025, 14:43 IST
Last Updated 9 ಮೇ 2025, 14:43 IST
ಶರಣಪ್ಪ ಮುದಗಲ್ 
ಶರಣಪ್ಪ ಮುದಗಲ್    

ಹೊಸಪೇಟೆ (ವಿಜಯನಗರ): ಹತ್ತಿ ಬೆಳೆ ಬಿತ್ತನೆಗೆ ಉದ್ದೇಶಿಸಿರುವ ಜಿಲ್ಲಾ ವ್ಯಾಪ್ತಿಯ ರೈತರಿಗೆ ಕೃಷಿ ವಿಜ್ಞಾನಿಗಳ ಶಿಫಾರಸಿನಂತೆ ಬೇಸಿಗೆ ಸಕಾಲವಲ್ಲ. ಜೂನ್ ಮೊದಲ ವಾರದಿಂದ ಜುಲೈ ಮೂರನೇ ವಾರದವರೆಗೆ ಬಿತ್ತನೆಯ ಕಾಲಾವಧಿಯನ್ನು ಅನುಸರಿಸಿ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್‌ ಹೇಳಿದ್ದಾರೆ.

ಹತ್ತಿ ಬೆಳೆಯುವ ರೈತರು ಮಾರುಕಟ್ಟೆಯಲ್ಲಿರುವ ವಿವಿಧ ಹತ್ತಿ ತಳಿಗಳ ಲಭ್ಯತೆಯ ಮೇಲೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಗಿದೆ. ಬಿತ್ತನೆ ಬೀಜ ಖರೀದಿಸುವ ಮುನ್ನ ಪ್ಯಾಕೇಟ್‌ ಅನ್ನು ಪರಿಶೀಲಿಸಿ, ತಯಾರಕ ಕಂಪನಿಯ ಪೂರ್ಣ ಹೆಸರು ಹಾಗೂ ವಿಳಾಸ ಸರಿ ಇರುವುದನ್ನು ಹಾಗೂ ಅದರೊಂದಿಗೆ ನಿಜ ಚೀಟಿ ಪತ್ರ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿತ್ತನೆ ಬೀಜವನ್ನು ಅಧಿಕೃತ ಪರವಾನಗಿ ಹೊಂದಿದ ಮಾರಾಟಗಾರರಿಂದ ಖರೀದಿಸಬೇಕು. ಕಡ್ಡಾಯವಾಗಿ ಖರೀದಿ ರಸೀದಿ ಪಡೆಯಬೇಕು. ಆಯಾ ತಳಿಯ ಬೇಸಾಯ ಪದ್ಧತಿಯ ಬಗ್ಗೆ ಕರಪತ್ರ ಪಡೆಯಬೇಕು. ಬಿತ್ತನೆ ಬಳಿಕ ಕಟಾವು ಆಗುವವರೆಗೂ ಬೀಜದ ಚೀಲ, ಅಲ್ಪ ಪ್ರಮಾಣದ ಬೀಜ, ರಸೀದಿ ಮತ್ತು ಕರಪತ್ರವನ್ನು ಕಾಯ್ದಿರಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ADVERTISEMENT

ಪ್ರತಿ ಬಿ.ಟಿ ಹತ್ತಿಯ ಪ್ಯಾಕೇಟ್ ಜತೆಗೆ 125 ಗ್ರಾಂ ಬಿ.ಟಿಯೇತರ(ರೆಪ್ಯೂಜಿ) ಬೀಜಗಳನ್ನು ನೀಡುತ್ತಿದ್ದು, ರೈತರು ತಮ್ಮ ಹೊಲದ ಸುತ್ತಲು ನಾಲ್ಕು ಸಾಲಿನಲ್ಲಿ ಈ ಬೀಜಗಳನ್ನು ಕಡ್ಡಾಯವಾಗಿ ಬಿತ್ತನೆ ಮಾಡಬೇಕು. ಇದರಿಂದ ಕಾಯಿಕೊರಕ ಹುಳುವಿನಲ್ಲಿ ಬಿ.ಟಿ ನಿರೋಧಕ ಶಕ್ತಿಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಹಾಗೂ ಕಾಯಿಕೊರಕದ ಬಾಧೆಯನ್ನು ಗುರುತಿಸಲು ಅನುಕೂಲವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.