ADVERTISEMENT

‘ಎರಡು ಬೆಳೆಗೆ ನೀರು ಬೇಕೇ ಬೇಕು’

ತುಂಗಭದ್ರಾ ರೈತ ಸಂಘದಿಂದ ಟಿ.ಬಿ.ಬೋರ್ಡ್‌ಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:39 IST
Last Updated 6 ಜೂನ್ 2025, 15:39 IST
ಹೊಸಪೇಟೆಯಲ್ಲಿ ಶುಕ್ರವಾರ ಕಾಲುವೆಗಳಿಗೆ ಶೀಘ್ರ ತುಂಗಭದ್ರಾ ನೀರು ಹರಿಸುವ ಕುರಿತಂತೆ ಮನವಿ ಸಲ್ಲಿಸಲಾಯಿತು
ಹೊಸಪೇಟೆಯಲ್ಲಿ ಶುಕ್ರವಾರ ಕಾಲುವೆಗಳಿಗೆ ಶೀಘ್ರ ತುಂಗಭದ್ರಾ ನೀರು ಹರಿಸುವ ಕುರಿತಂತೆ ಮನವಿ ಸಲ್ಲಿಸಲಾಯಿತು   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಗೆ ಈ ಬಾರಿ ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವ ಭರವಸೆ ಈಡೇರಿಲ್ಲ, ಹೀಗಿದ್ದರೂ ಈ ಬಾರಿ ಉತ್ತಮ ಮಳೆಯಾಗುವ ಸೂಚನೆ ಇರುವುದರಿಂದ ರೈತರ ಎರಡು ಬೆಳೆಗೆ ನೀರು ಒದಗಿಸಲೇಬೇಕು ಎಂದು ತುಂಗಭದ್ರಾ ರೈತ ಸಂಘ ಒತ್ತಾಯಿಸಿದೆ.

ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಅವರ ನೇತೃತ್ವದ ನಿಯೋಗ ಶುಕ್ರವಾರ ಇಲ್ಲಿ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್‌.ಕೆ.ರೆಡ್ಡಿ ಮತ್ತು  ಅಧೀಕ್ಷಕ ಎಂಜಿನಿಯರ್‌ ನಾರಾಯಣ ನಾಯ್ಕ ಅವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿತು.

‘ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಕಳೆದ ವರ್ಷ ಮುರಿದು ಬಿದ್ದಾಗ ಮುಂದಿನ ವರ್ಷಕ್ಕೆ ಜಲಾಶಯದ ಎಲ್ಲಾ 33 ಗೇಟ್‍ಗಳನ್ನು ನೂತನವಾಗಿ ತಯಾರಿಸಿ ಅಳವಡಿಸುತ್ತೇವೆಂದು ಭರವಸೆ ನೀಡಿದ್ದೀರಿ, ಆದರೆ ಇದುವರೆಗೂ ಯಾವುದೇ ಪ್ರಗತಿಯಾಗಿಲ್ಲ. ಈಗಾಗಲೇ ಜಲಾಶಯದಲ್ಲಿ 22 ಟಿಎಂಸಿ‌ ಅಡಿ ನೀರು ಶೇಖರಣೆಯಾಗಿದೆ ಮತ್ತು ಮಲೆನಾಡಿನಲ್ಲಿ ಉತ್ತಮ ಮಳೆಯಿಂದಾಗಿ ಜಲಾಶಯಕ್ಕೆ ಅತಿ ಹೆಚ್ಚು ನೀರು ಬರುತ್ತಿದೆ. ಗೇಟ್‌ಗಳನ್ನು ಅಳವಡಿಸದ ಕಾರಣ ಈ ಬಾರಿ ಶೇ 80ರಷ್ಟು ನೀರು ಶೇಖರಣೆ ಮಾತ್ರ ಸಾಧ್ಯ ಎಂದು ಹೇಳಲಾಗುತ್ತಿದೆ.  ಹೀಗಾಗಿ 25 ಟಿಎಂಸಿ ಅಡಿ ನೀರು ತುಂಬಿದಾಗಲೇ ಕಾಲುವೆಗಳಿಗೆನೀರು ಹರಿಸಲು ಆರಂಭಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ADVERTISEMENT

ನಿಯೋಗದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಕೊಂಚಗೇರಿ ದೊಡ್ಡ ಮಲ್ಲಪ್ಪ, ದರೂರ್ ಎಂ.ವೀರಭದ್ರನಾಯಕ, ಎಂ.ರಾಮಾಂಜಿನಿ ನಾಯಕ, ಕುರುಬರ ಗಾದಿಲಿಂಗಮೂರ್ತಿ, ಅಂಗಡಿ ರಾಜಾಗೌಡ, ಬಸವನಗೌಡ  ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.