ADVERTISEMENT

ತೆಕ್ಕಲಕೋಟೆ | ಹದಗೆಟ್ಟ ಸಿಸಿ ರಸ್ತೆ; ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:47 IST
Last Updated 20 ಆಗಸ್ಟ್ 2025, 5:47 IST
ಶಾನವಾಸಪುರ ಗ್ರಾಮದ ಆಶ್ರಯ ಕಾಲೊನಿಯಲ್ಲಿ ಚರಂಡಿ ಕಾಮಗಾರಿಯಿಂದಾಗಿ ಸಿಸಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಗ್ರಾಮಸ್ಥರು ಪ್ರತಿಭಟನೆ ವ್ಯಕ್ತಪಡಿಸಿದರು
ಶಾನವಾಸಪುರ ಗ್ರಾಮದ ಆಶ್ರಯ ಕಾಲೊನಿಯಲ್ಲಿ ಚರಂಡಿ ಕಾಮಗಾರಿಯಿಂದಾಗಿ ಸಿಸಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಗ್ರಾಮಸ್ಥರು ಪ್ರತಿಭಟನೆ ವ್ಯಕ್ತಪಡಿಸಿದರು   

ತೆಕ್ಕಲಕೋಟೆ: ಸಮೀಪದ ಶಾನವಾಸಪುರ ಗ್ರಾಮದ ಆಶ್ರಯ ಕಾಲೊನಿಯ ಅಂಗಡಿ ಶಾಂತಪ್ಪನ ಓಣೆಯಲ್ಲಿ ಚರಂಡಿ ಕಾಮಗಾರಿಯಿಂದಾಗಿ ಸಿಸಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

‘2024-25 ನೇ ಸಾಲಿನಲ್ಲಿ ಮಂಜೂರಾದ ನರೇಗಾ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ₹6 ಲಕ್ಷ ವೆಚ್ಚದ ಸಿಸಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಚರಂಡಿಗಾಗಿ ಅಗೆದ ಮಣ್ಣು ಸಿಸಿ ರಸ್ತೆಯ ಮೇಲೆ ಹಾಕಿದ್ದು, ರಸ್ತೆ ಸಂಪೂರ್ಣ ಕೆಸರುಮಯ ಆಗಿದೆ. ಅಲ್ಲದೆ, ಮತ್ತೊಂದು ಬದಿಯ ಚರಂಡಿಯು ಸಿಸಿ ರಸ್ತೆಗಿಂತ ಎರಡು ಅಡಿ ಎತ್ತರ ಇದೆ. ಅಧಿಕಾರಿಗಳು ಲಂಚ ಪಡೆದು ಬಿಲ್ ಮಾಡುತ್ತಾರೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್‌ಲೈನ್ ಒಡೆದ ಪರಿಣಾಮ ಸಾಕಷ್ಟು ನೀರು ಚರಂಡಿಯಲ್ಲಿ ಹರಿಯುತ್ತಿದೆ. ಅಲ್ಲದೆ ಇದೇ ನೀರು ಮನೆಗಳಿಗೂ ನುಗ್ಗುತ್ತಿದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ADVERTISEMENT

'ವಯಸ್ಸಾದವರು, ಮಕ್ಕಳು ರಸ್ತೆಯಲ್ಲಿ ನಡಿಯಾಕ ಬರಂಗಿಲ್ಲ. ಈ ಕೆಸರಿನ್ಯಾಗ ಹೆಂಗ ಓಡಾಡೋದು?’ ಎಂದು ಗ್ರಾಮಸ್ಥರಾದ ಈರಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿ ಕುರಿತು ಮಾಹಿತಿ ಪಡೆದುಕೊಂಡು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು
ರಾಮಚಂದ್ರ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಿರುಗುಪ್ಪ

‘ಚರಂಡಿ ಕಾಮಗಾರಿ ಮಳೆಗಾಲದ ನಂತರ ಪ್ರಾರಂಭಿಸುವಂತೆ ಗುತ್ತಿಗೆದಾರನಿಗೆ ಹಾಗೂ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಈಗ ರಸ್ತೆಯೂ ಇಲ್ಲ, ಚರಂಡಿಯೂ ಇಲ್ಲ’ ಎಂದು ಗ್ರಾಮಸ್ಥ ಶಿವಕುಮಾರಗೌಡ ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಒ ವೀರೇಶ, ‘ಸಿಸಿ ರಸ್ತೆ ಮೇಲೆ ಹಾಕಲಾದ ಮಣ್ಣನ್ನು ಸಂಪೂರ್ಣವಾಗಿ ಸ್ಥಳಾಂತರಿಸುವಂತೆ ಗುತ್ತಿಗೆದಾರನಿಗೆ ತಿಳಿಸಲಾಗಿದೆ’ ಎಂದರು.

ಗ್ರಾಮಸ್ಥರಾದ ಯರೆಪ್ಪಗೌಡ, ಸೋಮನಗೌಡ, ವೀರೇಶಗೌಡ, ಶೇಕ್ಷಾವಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.