ADVERTISEMENT

ಕಳಪೆ ಆಹಾರ ಪೂರೈಕೆ: ಹೊಸಪೇಟೆಯಲ್ಲಿ ಚುನಾವಣಾ ಸಿಬ್ಬಂದಿ ಧರಣಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 15:43 IST
Last Updated 27 ಡಿಸೆಂಬರ್ 2021, 15:43 IST
ಳಪೆ ಆಹಾರ ಪೂರೈಸಿರುವುದನ್ನು ವಿರೋಧಿಸಿ ಚುನಾವಣಾ ಸಿಬ್ಬಂದಿ ಸೋಮವಾರ ಸಂಜೆ ಹೊಸಪೇಟೆ ಎಲ್‌ಎಫ್‌ಎಸ್‌ ಶಾಲೆ ಆವರಣದಲ್ಲಿ ದಿಢೀರ್‌ ಧರಣಿ ನಡೆಸಿದರು.
ಳಪೆ ಆಹಾರ ಪೂರೈಸಿರುವುದನ್ನು ವಿರೋಧಿಸಿ ಚುನಾವಣಾ ಸಿಬ್ಬಂದಿ ಸೋಮವಾರ ಸಂಜೆ ಹೊಸಪೇಟೆ ಎಲ್‌ಎಫ್‌ಎಸ್‌ ಶಾಲೆ ಆವರಣದಲ್ಲಿ ದಿಢೀರ್‌ ಧರಣಿ ನಡೆಸಿದರು.   

ಹೊಸಪೇಟೆ (ವಿಜಯನಗರ): ಕಳಪೆ ಆಹಾರ ಪೂರೈಸಿರುವುದನ್ನು ವಿರೋಧಿಸಿ ಚುನಾವಣಾ ಸಿಬ್ಬಂದಿ ಸೋಮವಾರ ಸಂಜೆ ಇಲ್ಲಿನ ಎಲ್‌ಎಫ್‌ಎಸ್‌ ಶಾಲೆ ಆವರಣದಲ್ಲಿ ದಿಢೀರ್‌ ಧರಣಿ ನಡೆಸಿದರು.

ನಗರಸಭೆ ಚುನಾವಣೆ ಮುಗಿದ ನಂತರ ಎಲೆಕ್ಟ್ರಾನಿಕ್‌ ಮತಯಂತ್ರಗಳೊಂದಿಗೆ ಎಲ್‌ಎಫ್‌ಎಸ್‌ ಶಾಲೆಗೆ ಬಂದ ಸಿಬ್ಬಂದಿ ಎಲ್ಲರೂ ಒಂದೆಡೆ ಸೇರಿದರು. ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.

ಬಹುತೇಕ ಮತಗಟ್ಟೆಗಳಲ್ಲಿ ರಾತ್ರಿ ಮಲಗಲು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಬೆಡ್‌ಶೀಟ್‌ ಇರಲಿಲ್ಲ. ಫ್ಯಾನ್‌, ಶೌಚಾಲಯ ವ್ಯವಸ್ಥೆ ಸರಿ ಇರಲಿಲ್ಲ. ಭಾನುವಾರ ರಾತ್ರಿ ಆಹಾರ ಪೂರೈಸಿರಲಿಲ್ಲ. ಸೋಮವಾರ ಮಧ್ಯಾಹ್ನ 4ಕ್ಕೆ ಕೆಲವು ಕಡೆ ಆಹಾರ ಪೂರೈಸಿದರೆ ಕೆಲವು ಕಡೆ ತಲುಪಿಸಲಿಲ್ಲ. ಆಹಾರ ತೀರ ಕಳಪೆಯಾಗಿತ್ತು. ಆಹಾರ ಪೂರೈಸಿದವರನ್ನು ಸ್ಥಳಕ್ಕೆ ಕರೆಸಬೇಕು. ಇದರ ಹೊಣೆ ಹೊತ್ತ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದರು.

ADVERTISEMENT

ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ‘ನೌಕರರು ಈ ರೀತಿ ಧರಣಿ ನಡೆಸಬಾರದು. ಈ ಕುರಿತು ದೂರು ಕೊಡಬಹುದಷ್ಟೇ’ ಎಂದು ಮಧ್ಯಪ್ರವೇಶಿಸಿ ಹೇಳಿದರು. ಅದಕ್ಕೆ ಸಿಟ್ಟಿಗೆದ್ದ ನೌಕರರು, ‘ನೀವು ನೌಕರರ ಪರ ಮಾತನಾಡುವುದನ್ನು ಬಿಟ್ಟು ಜಿಲ್ಲಾಡಳಿತದ ಪರ ವಕಾಲತ್ತು ಮಾಡುತ್ತಿದ್ದೀರಿ. ನಮ್ಮಿಂದ ಆಯ್ಕೆಯಾದ ನಿಮ್ಮ ಧೋರಣೆ ಸರಿಯೇ?’ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಅವರ ವಿರುದ್ಧ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಮಾತನಾಡಿ, ‘ನಮ್ಮಿಂದ ಲೋಪವಾಗಿದೆ. ಎಲ್ಲಿ, ಏನಾಗಿದೆ ಎನ್ನುವುದನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಹೇಳಿ ವಾತಾವರಣ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.