ಹೊಸಪೇಟೆ (ವಿಜಯನಗರ): ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಿದರು.
‘ಸರ್ಕಾರದ ಎರಡು ವರ್ಷದ ಸಾಧನೆಗಳ ಸಮಾವೇಶವನ್ನು ಹೊಸಪೇಟೆ ನಗರದಲ್ಲಿ ಆಯೋಜಿಸಿ ಯಶಸ್ವಿಗೊಳಿಸಿರುವುದು ತೃಪ್ತಿ ನೀಡಿದೆ. ರಾಜ್ಯ ಸರ್ಕಾರವು ಜಾರಿ ಮಾಡಿದ ಅನ್ನಭಾಗ್ಯ ಯೋಜನೆಯಿಂದ ಕಡು ಬಡವರು, ಕೃಷಿ ಕೂಲಿಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಿದೆ’ ಎಂದು ಅವರು ತಿಳಿಸಿದರು.
‘ಗೃಹ ಲಕ್ಷ್ಮಿ ಯೋಜನೆ ಜಾರಿಯಿಂದಾಗಿ ಮಹಿಳೆಯರಿಗೆ ಪ್ರತಿ ತಿಂಗಳು ₹2000 ಸಿಗುತ್ತಿದೆ. ಗೃಹ ಜ್ಯೋತಿ ಯೋಜನೆಯಿಂದ ಅರ್ಹ ಫಲಾನುಭವಿಗಳಿಗೆೆ ಮತ್ತು ಯುವನಿಧಿ ಯೋಜನೆಯಿಂದ ನಿರುದ್ಯೋಗಿ ಯುವಕರಿಗೆ ಸಾಕಷ್ಟು ಅನುಕೂಲವಾಗಿದೆ. ಶಕ್ತಿ ಯೋಜನೆ ಜಾರಿಯಿಂದಾಗಿ ವಿಜಯನಗರ ಜಿಲ್ಲೆಯ ಸಾರಿಗೆ ಸಂಸ್ಥೆಗೆ ಪ್ರತಿ ತಿಂಗಳು ಕೋಟಿಗಟ್ಟಲೆ ಆದಾಯ ಬರುತ್ತಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಧನಂಜಯಪ್ಪ.ಬಿ ಮಾತನಾಡಿ, ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬಸ್ ನಿಲ್ದಾಣಗಳಲ್ಲಿ ವಸ್ತು ಪ್ರದರ್ಶನ ಮಳಿಗೆಯನ್ನು ಹಾಕಲಾಗಿದೆ ಎಂದರು.
‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ವಾರ್ತಾ ಇಲಾಖೆಯ ಕೆ.ರಾಮಾಂಜನೇಯ, ಕೆಕೆಆರ್‌ಟಿಸಿಯ ರಾಜಶೇಖರ್ ವಾಜಂತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.