ADVERTISEMENT

‘ತಜ್ಞರ ಎಚ್ಚರಿಕೆ ಕಡೆಗಣನೆಯೇ ಎರಡನೆ ಅಲೆ ತೀವ್ರತೆಗೆ ಕಾರಣ’-ಎಂ.ಚಂದ್ರ ಪೂಜಾರಿ

​ಪ್ರಜಾವಾಣಿ ವಾರ್ತೆ
Published 21 ಮೇ 2021, 14:59 IST
Last Updated 21 ಮೇ 2021, 14:59 IST

ಹೊಸಪೇಟೆ(ವಿಜಯನಗರ): ‘ಮಾರ್ಚ್ ನಂತರ ಕೋವಿಡ್ ಎರಡನೇ ಅಲೆಯು ದೇಶದಲ್ಲಿ ತೀವ್ರವಾಗಿ ಕಾಡಲಿದೆ ಎಂಬ ತಜ್ಞರ ಸಮಿತಿಯ ಎಚ್ಚರಿಕೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕಡೆಗಣಿಸಿದ ಪರಿಣಾಮ ಸಾಕಷ್ಟು ಜನ ಸಾಯುತ್ತಿದ್ದಾರೆ’ ಎಂದು ಚಿಂತಕ ಎಂ.ಚಂದ್ರ ಪೂಜಾರಿ ತಿಳಿಸಿದರು.

ಆಲ್ ಇಂಡಿಯಾ ಡೆಮೊಕ್ರಟಿಕ್ ಯುತ್ ಆರ್ಗನೈಸೇಷನ್ (ಎಐಡಿವೈಒ) ರಾಜ್ಯ ಸಮಿತಿ ಜಿಲ್ಲಾ ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಹದಗೆಟ್ಟ ಆರೋಗ್ಯ ವ್ಯವಸ್ಥೆ: ಕಾರಣವೇನು?’ ಕುರಿತ ರಾಜ್ಯಮಟ್ಟದ ವೆಬಿನಾರ್‌ನಲ್ಲಿ ಮಾತನಾಡಿದರು.

‘ತಜ್ಞರ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬದಲಿಗೆ ಕೇಂದ್ರ ಸರ್ಕಾರ ಪಂಚರಾಜ್ಯಗಳ ಚುನಾವಣೆಯಲ್ಲಿ ತಲ್ಲೀನವಾಗಿತ್ತು. ಜನದಟ್ಟಣೆ ತಪ್ಪಿಸುವ ಬದಲು ತಾನೇ ಮುಂದೆ ನಿಂತು ಚುನಾವಣಾ ರ‍್ಯಾಲಿ ಹಾಗೂ ಕುಂಭಮೇಳದಂತಹ ಲಕ್ಷಾಂತರ ಜನ ಸೇರುವ ಕಾರ್ಯಕ್ರಮಕ್ಕೆ ಸ್ವತಃ ಹಣ ಬಿಡುಗಡೆ ಮಾಡಿ ಅವಕಾಶ ಮಾಡಿಕೊಟ್ಟಿತು. ಈ ಕಾರಣವಾಗಿಯೇ ಸೋಂಕು ಇಡೀ ದೇಶವ್ಯಾಪಿ ಪಸರಿಸಿದೆ. ಅದರಿಂದಾಗಿಯೇ ದೇಶದಾದ್ಯಂತ ಜನ ಸಾವನ್ನಪ್ಪುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಹೋದ ವರ್ಷ ಶೇ 70ರಷ್ಟು ನಗರ ವಾಸಿಗಳು, ಶೇ 30ರಷ್ಟು ಗ್ರಾಮೀಣ ಭಾಗದವರಿಗೆ ಸೋಂಕು ವ್ಯಾಪಿಸಿತ್ತು. ಈ ಸಲ ಶೇ 65ರಷ್ಟು ಗ್ರಾಮೀಣರಿಗೆ ಸೋಂಕು ತಗುಲಿದೆ. 80 ಕೋಟಿ ಜನ ಎರಡು ಡೋಸ್‌ ಲಸಿಕೆ ಪಡೆಯಲು ಒಂದುವರೆ ವರ್ಷ ಕಾಯಬೇಕಿದೆ. ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿದ ಪರಿಣಾಮದಿಂದ ಜನರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ’ ಎಂದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಎಂ.ಉಮಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.