ADVERTISEMENT

ವರ್ಷಾಂತ್ಯಕ್ಕೆ ‘ಹಂಪಿ ಶುಗರ್ಸ್‌’ ಶಂಕುಸ್ಥಾಪನೆ: ಸಚಿವ ಆನಂದ್‌ ಸಿಂಗ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 16:49 IST
Last Updated 7 ಸೆಪ್ಟೆಂಬರ್ 2022, 16:49 IST
   

ಹೊಸಪೇಟೆ (ವಿಜಯನಗರ): ‘ನಗರದ ಕಾರಿಗನೂರಿನಲ್ಲಿ ‘ಹಂಪಿ ಶುಗರ್ಸ್‌’ ಸಕ್ಕರೆ ಕಾರ್ಖಾನೆ ಆರಂಭಿಸಲು ಜಮೀನು ಗುರುತಿಸಲಾಗಿದ್ದು, ವರ್ಷಾಂತ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಘೋಷಿಸಿದರು.

ನಗರದ ರೈತ ಭವನದಲ್ಲಿ ಬುಧವಾರ ಐ.ಎಸ್‌.ಆರ್ ಕಾರ್ಖಾನೆಯಿಂದ ರೈತರಿಗೆ ಹಳೆ ಬಾಕಿ ಚೆಕ್ ವಿತರಣೆ ಸಮಾರಂಭದಲ್ಲಿ ಸಚಿವ ಉಮೇಶ ಕತ್ತಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ, ಕಾರ್ಯಕ್ರಮ ಮುಂದೂಡಲಾಯಿತು. ಈ ವೇಳೆ ಮಾತನಾಡಿದ ಸಚಿವರು, ಕಾರಿಗನೂರಿನ ವರ್ತುಲ ರಸ್ತೆಯಲ್ಲಿ ಸಕ್ಕರೆ ಕಾರ್ಖಾನೆಗೆ 85 ಎಕರೆ ಜಾಗ ಗುರುತಿಸಲಾಗಿದೆ. ಇನ್ನೂ 50 ಎಕರೆ ಒದಗಿಸಬೇಕಾಗಿದೆ ಎಂದರು.

ಸಕ್ಕರೆ ಕಾರ್ಖಾನೆ ಲಾಭದಾಯಕವಲ್ಲ ಎಂಬುದು ಅನೇಕರ ಅಭಿಪ್ರಾಯವಾಗಿತ್ತು. ಆದರೆ, ಬೆಳಗಾವಿಯಲ್ಲಿ ಸುಸ್ಥಿತಿಯಲ್ಲೇ ನಡೆಯುತ್ತಿವೆ. ಆ ಜಿಲ್ಲೆಯ ಮುಖಂಡರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್‌, ದಾವಣಗೆರೆಯ ಶ್ಯಾಮನೂರು ಅವರಲ್ಲಿ ಕಾರ್ಖಾನೆ ಆರಂಭಿಸಲು ಮನವಿ ಮಾಡಿದ್ದೆ. ಯಾರೂ ಆಸಕ್ತಿ ತೋರಿಸಿರಲಿಲ್ಲ. ಸಿದ್ದೇಶ್ವರ ಅಂಡ್ ಕಂಪೆನಿ ಒಡೆತನದಲ್ಲಿ ನಗರದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಐ.ಎಸ್‌.ಆರ್ ಸಕ್ಕರೆ ಕಾರ್ಖಾನೆ ಮುಚ್ಚಿದ್ದರಲ್ಲಿ ನನ್ನ ಪಾತ್ರವಿಲ್ಲ. ಕಾರ್ಖಾನೆಯ ಮಾಲೀಕರ ಹಠಮಾರಿತನ, ತಪ್ಪು ನಿರ್ಧಾರಗಳಿಂದ ಮುಚ್ಚಿದೆ. ಆದರೆ, ಕಾರ್ಖಾನೆ ಸ್ಥಗಿತಗೊಳ್ಳಲು ನಾನೇ ಕಾರಣ ಎಂದು ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಂದ್ ಮಾಡಿಸುವ ದುರುದ್ದೇಶವೂ ನನಗಿಲ್ಲ. ಆದರೆ, ಈ ಭಾಗದಲ್ಲಿ ಕಬ್ಬು ಬೆಳೆಗಾರರು, ಕಾರ್ಮಿಕರ ಹಿತದೃಷ್ಟಿಯಿಂದ ಹೊಸದಾಗಿ ಕಾರ್ಖಾನೆ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.

ಐ.ಎಸ್‌.ಆರ್ ಕಾರ್ಖಾನೆಯ ಪ್ರತಿನಿಧಿ ಕರಿಬಸಪ್ಪ, ಐ.ಎಸ್‌.ಆರ್ ಕಾರ್ಖಾನೆ ವ್ಯಾಪ್ತಿಯ 3,500 ರೈತರ ಬಾಕಿ ಹಣ ನೇರ ಅವರ ಖಾತೆಗಳಿಗೆ ಸಂದಾಯ ಮಾಡಲಾಗುತ್ತದೆ ಎಂದರು.

‘ಚುನಾವಣೆಯಲ್ಲಿ ಗೆಲ್ಲಿಸಿದರೆ ಉದ್ಘಾಟನೆಗೆ ಬರುವೆ’
‘ನಗರದ ರೈತರ ಸಂಘದ ರೈತ ಭವನದ ಪುನರ್‌ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ₹5 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ವರ್ಷದೊಳಗೆ ಉದ್ಘಾಟನೆಯಾಗಲಿದೆ. ಮುಂದಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಉದ್ಘಾಟನೆge ಬರುತ್ತೇನೆ. ಇಲ್ಲವಾದರೆ ಶಂಕುಸ್ಥಾಪನೆಗೆ ಖುಷಿ ಪಡಬೇಕಾಗುತ್ತದೆ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.