ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠದ ಆವರಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಹೋಬಳಿಮಟ್ಟದ ಜನಸ್ಪಂದನಾ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತು, ಹಲವು ಸಮಸ್ಯೆಗಳನ್ನು ಜಿಲ್ಲಾಡಳಿತದ ಎದುರು ತೆರೆದಿಟ್ಟರು.
‘ತಾಲ್ಲೂಕಿನ ಅರಸೀಕೆರೆ ಹೋಬಳಿ 7 ಗ್ರಾಮ ಪಂಚಾಯಿತಿಗಳು ದಾವಣಗೆರೆ ಜಿಲ್ಲೆ ಜಗಳೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿವೆ. ಎರಡು ಕ್ಷೇತ್ರಗಳ ನಡುವೆ ಸಿಲುಕಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ಸಾರ್ವಜನಿಕರಿಗೆ ಅನುಕೂಲವಿರುವ ಕಾಮಗಾರಿಗಳು ಆಗುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ಎದುರು ಹೋಬಳಿ ವ್ಯಾಪ್ತಿಯ ಹಳ್ಳಿಯ ಜನರು ದೂರಿದರು.
ಆಧಾರ ಕಾರ್ಡ್ ಸೇವಾ ಕೇಂದ್ರ ಆರಂಭಿಸಲು ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರು, ಶುಶ್ರೂಕಿಯರನ್ನು ನೇಮಿಸಬೇಕು ಎಂದು ಜನರು ಒತ್ತಾಯಿಸಿದರು. ಜಿಲ್ಲಾಧಿಕಾರಿ ದಿವಾಕರ ಅವರು ಇಂದಿನಿಂದಲೇ ವೈದ್ಯ, ಸಿಬ್ಬಂದಿ ನೇಮಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರನಾಯ್ಕ ಅವರಿಗೆ ಸೂಚಿಸಿದರು.
ಅಪೂರ್ಣಗೊಂಡಿರುವ ಬಸ್ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಭರವಸೆ ನೀಡಿದ ಜಿಲ್ಲಾಧಿಕಾರಿ, ಇ ಸ್ವತ್ತು ಮನೆ ಬಾಲಿಗಿಗೆ ತಲುಪಿಸಲು ನಿರ್ಲಕ್ಷ್ಯ ಮಾಡಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಪಿಡಿಒಗೆ ಎಚ್ಚರಿಕೆ ನೀಡಿದರು. ಮಟ್ಕಾ ದಂಧೆ ನಡೆಸುವವರ ಬಗ್ಗೆ ಮಾಹಿತಿ ಕೊಟ್ಟರೆ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ‘ತಾಲ್ಲೂಕಿನಲ್ಲಿ ಹೆರಿಗೆ ವೈದ್ಯರ ಕೊರತೆಯಿದೆ. ಒಟ್ಟು 15,630 ಹೆರಿಗೆಗಳಾಗಿದ್ದು, ಅದರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 11,700 ಹೆರಿಗೆ ಮಾಡಿಸಲಾಗಿದೆ. ಶೀಘ್ರ ವೈದ್ಯರ ನೇಮಕ ಮಾಡಲಾಗುವುದು’ ಎಂದರು.
15 ದಿನದಲ್ಲಿ ವಿವಿಧ ಕೆರೆಗಳ ಒತ್ತುವರಿ ತೆರವಿಗೆ ಸೂಚಿಸಿದರು. ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಸರ್ಕಾರಿ ಸಾರಿಗೆ ಬಸ್ ಸಂಚಾರ ಒದಗಿಸಬೇಕು. ತೌಡೂರಿನಲ್ಲಿ ಸ್ಮಶಾನ ಜಾಗಕ್ಕೆ ಮನವಿ ಸಲ್ಲಿಸಿದರು. ಬಾಲಕಿಯರ ವಸತಿ ನಿಲಯ ತೆರೆಯಬೇಕು. ಕ್ಯಾರಕಟ್ಟೆ ಗ್ರಾಮದ ಸ್ಮಶಾನಕ್ಕೆ ಹದ್ದುಬಸ್ತು ಮಾಡಿಕೊಡಬೇಕು ಎಂದು ಸೂಚಿಸಿದರು.
ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಅರಸೀಕೆರೆ ಹೋಬಳಿ ಕೇಂದ್ರ ಒಳಗೊಂಡು ವಿವಿಧ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ‘ಶೀಘ್ರ ಹೋಬಳಿ ಕೇಂದ್ರದಲ್ಲಿ ಜನಸಂಪರ್ಕ ಕಚೇರಿ ಆರಂಭಿಸಿ, ವಾರಕ್ಕೊಮ್ಮೆ ಬೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸಲಾಗುವುದು’ ಎಂದರು.
ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಲಮ್ಮ, ಅರಸೀಕೆರೆ ಎನ್.ಕೊಟ್ರೇಶ್, ಸಲಾಂಸಾಬ್, ಮಂಜುನಾಥ, ಗುಡಿಹಳ್ಳಿ ಹಾಲೇಶ್ ಇದ್ದರು.
ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ 738 ಸ್ಮಶಾನ ಅಭಿವೃದ್ಧಿ ಪಡಿಸಲಾಗಿದೆ. ಸ್ಮಶಾನ ಭೂಮಿ ಒತ್ತುವರಿಯಾಗಿದ್ದರೆ ಕೂಡಲೇ ತೆರವುಗೊಳಿಸಲು ಸೂಚಿಸಲಾಗಿದೆ. ಅರಸೀಕೆರೆ ಬಸ್ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಲಾಗುವುದುಎಂ.ಎಸ್.ದಿವಾಕರ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.