ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆ ಎಂದ ತಕ್ಷಣ ನೆನಪಿಗೆ ಬರುವುದು ಪ್ರವಾಸೋದ್ಯಮ ಮತ್ತು ಗಣಿಗಾರಿಕೆ. ಎರಡೂ ಕ್ಷೇತ್ರಗಳು ನೇರ ಮತ್ತು ಪರೋಕ್ಷ ಉದ್ಯೋಗ ಕಲ್ಪಿಸಬಲ್ಲ ಸಾಮರ್ಥ್ಯ ಹೊಂದಿವೆ. ಇವುಗಳಿಗೆ ಸಾಂಪ್ರದಾಯಿಕ ಶಿಕ್ಷಣದ ಬುನಾದಿ ಸಿಕ್ಕಿದಾಗ ಅಭ್ಯರ್ಥಿಯ ಉದ್ಯೋಗದ ಕನಸು ನನಸು ನಿಶ್ಚಿತ.
ವಿಜಯನಗರ ಜಿಲ್ಲೆಯ ಈ ಮಣ್ಣಿನ ಗುಣವನ್ನು ಅರಿತು ಹೊಸಪೇಟೆಯ ಟಿಎಂಎಇಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 17 ವರ್ಷಗಳಿಂದ ಮೈನಿಂಗ್ ಮತ್ತು ಮೆಟಲರ್ಜಿ ಎಂಜಿನಿಯರಿಂಗ್ ಕೋರ್ಸ್‌ಗಳು ನಡೆಯುತ್ತಿದ್ದು, ಕಲಿತ ಎಲ್ಲರಿಗೂ ಉದ್ಯೋಗ ಸಿಕ್ಕಿದೆ ಎಂಬುದು ವಿಶೇಷ. 1983ರಿಂದ ಈ ಭಾಗದಲ್ಲಿ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಾವಿರಾರು ಮಂದಿ ನೀಡಿರುವ ಸಂಸ್ಥೆಯ ಹಿರಿಮೆ ಏನು ಎಂದರೆ, ಮೈನಿಂಗ್ ಮತ್ತು ಮೆಟಲರ್ಜಿ ವಿಭಾಗಗಳು ಇರುವ ರಾಜ್ಯದ ಕೇವಲ ನಾಲ್ಕು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಇದೂ ಒಂದು ಆಗಿರುವುದು. ಹೀಗಾಗಿ ಎಲ್ಲೆಡೆಯಿಂದ ಇತ್ತ ಕುತೂಹಲದ ದೃಷ್ಟಿ ಸಹಜ.
ಟಿಎಂಎಇಎಸ್ ಸಂಸ್ಥೆ ಸರ್ಕಾರಿ ಅನುದಾನಿತ ಪಾಲಿಟೆಕ್ನಿಕ್ ಆಗಿದ್ದು, ಎಐಸಿಟಿಇಗೆ ಸಂಯೋಜಿತಗೊಂಡಿದೆ. ಸರ್ಕಾರ ನಿಗದಿಪಡಿಸಿದ ಶುಲ್ಕ, ಮೀಸಲಾತಿ ಎಲ್ಲವೂ ಇಲ್ಲಿ ಅನ್ವಯ. ಎಸ್‌ಎಸ್ಎಲ್‌ಸಿ ಪಾಸಾದವರಿಗೆ ಮೂರು ವರ್ಷದ ಡಿಪ್ಲೊಮಾ ತರಗತಿ ಇದ್ದರೆ, ಐಟಿಐ, ದ್ವಿತೀಯ ಪಿಯು ವಿಜ್ಞಾನದಲ್ಲಿ ಪಾಸಾದವರಿಗೆ ಎರಡನೇ ವರ್ಷಕ್ಕೆ ನೇರ ಪ್ರವೇಶ ಇದೆ.
ಮೈನಿಂಗ್ ಎಂಜಿನಿಯರಿಂಗ್ ಡಿಪ್ಲೊಮಾ ಮಾಡಿದವರಿಗೆ ಗಣಿಗಾರಿಕೆ ಕ್ಷೇತ್ರದ ಹಲವು ವಿಭಾಗಗಳಲ್ಲಿ, ಹಟ್ಟಿ ಚಿನ್ನದ ಗಣಿ, ಗಣಿ ಸರ್ವೇಯರ್ ಸಹಿತ ವಿವಿಧ ಕಡೆ ಕೆಲಸದ ಅವಕಾಶ ಇದೆ. ಮೆಟಲರ್ಜಿ ಎಂಜಿನಿಯರಿಂಗ್ ಡಿಪ್ಲೊಮಾ ಮಾಡಿದವರಿಗೆ ಉಕ್ಕಿನ ಕಾರ್ಖಾನೆಗಳಲ್ಲಿ ಕೆಲಸ ನಿಶ್ಚಿತ. ಹೊಸಪೇಟೆ, ಬಳ್ಳಾರಿ ಭಾಗದಲ್ಲಿ ಸಾಕಷ್ಟು ಗಣಿ ಕಂಪನಿಗಳು, ಉಕ್ಕಿನ ಕಾರ್ಖಾನೆಗಳಿದ್ದು, ಇಲ್ಲಿಂದ ಹೊರಬರುವ ಅಭ್ಯರ್ಥಿಗಳಿಗಾಗಿಯೇ ಈ ಕಂಪನಿಗಳು ಕಾಯುತ್ತಿರುವಂತೆ ಅವಕಾಶದ ಹೆಬ್ಬಾಗಿಲು ತೆರೆದಿರುತ್ತದೆ.
ರಾಜ್ಯದ ಎಂಜಿನಿಯರಿಂಗ್ ಕಾಲೇಜ್‌ಗಳಲ್ಲಿ ಮೈನಿಂಗ್ ಮತ್ತು ಮೆಟಲರ್ಜಿ ಎಂಜಿನಿಯರಿಂಗ್ ವಿಭಾಗ ಇರುವ ಕಾಲೇಜುಗಳು ಕೆಲವೇ ಕೆಲವು ಇವೆ. ಹೀಗಾಗಿ ಈ ವಿಭಾಗಗಳಲ್ಲಿ ಬಿ.ಇ ಅಥವಾ ಬಿ.ಟೆಕ್ ಪದವಿ ಗಳಿಸುವ ಪದವೀಧರರ ಸಂಖ್ಯೆಯೂ ಕಡಿಮೆ ಇದೆ. ಡಿಪ್ಲೊಮಾ ಮಾಡಿದವರಿಗೆ ಉದ್ಯೋಗ ಅವಕಾಶ ಸಿಗುವುದಕ್ಕೆ ಇದೂ ಒಂದು ಕಾರಣ.
ಇಷ್ಟೆಲ್ಲ ಅವಕಾಶ ಇರುವಾಗ ನೀವೇಕೆ ಟಿ.ಎಂ.ಎ.ಇ.ಎಸ್. ಸಂಪರ್ಕಿಸಬಾರದು ಎಂಬ ಪ್ರಶ್ನೆ ಸಹಜ. ಹಾಗಿದ್ದರೆ ಸಂಪರ್ಕಿಸಿ: 9383416299/ 9448261955.
ಮೈನಿಂಗ್ ಮೆಟಲರ್ಜಿ ಕೋರ್ಸ್ ಇರುವ ರಾಜ್ಯದ ಕೆಲವೇ ಕೆಲವು ಸಂಸ್ಥೆಗಳಲ್ಲಿ ನಮ್ಮದೂ ಒಂದು ಎಂದು ಹೇಳುತ್ತಿರುವುದಕ್ಕೆ ಹೆಮ್ಮೆ ಇದೆ. ಇಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗ ನಿಶ್ಚಿತವಾಗಿ ಸಿಗುತ್ತದೆಎಚ್.ಕೆ.ಶಂಕರಾನಂದ ಪ್ರಾಂಶುಪಾಲ ಟಿ.ಎಂ.ಎ.ಇ.ಎಸ್ ಪಾಲಿಟೆಕ್ನಿಕ್ ಹೊಸಪೇಟೆ
ಬಳ್ಳಾರಿ ಹೊಸಪೇಟೆ ಭಾಗದಲ್ಲಿ ಗಣಿಗಾರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಆರಂಭವಾದ ಎರಡು ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆ ಆಗಿದ್ದೇ ಇಲ್ಲ. ಉದ್ಯೋಗ ಗಿಟ್ಟಿಸಲು ಈ ಕೋರ್ಸ್‌ಗಳು ರಹದಾರಿ ಇದ್ದಂತೆಯೋಗಾನಂದ ಟಿ.ಎಲ್. ಮುಖ್ಯಸ್ಥರು ಮೈನಿಂಗ್ ಮತ್ತು ಮೆಟಲರ್ಜಿ ವಿಭಾಗ
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 2020ರಿಂದ 2023ವರೆಗೆ ಚಾಲ್ತಿಯಲ್ಲಿದ್ದ ಒಂದು ವರ್ಷದ ಪ್ರವಾಸೋದ್ಯಮ ಪತ್ರಿಕೋದ್ಯಮ ಯೋಗ ಕೋರ್ಸ್‌ಗಳು ಮತ್ತೆ ಅರಂಭವಾಗುವ ಲಕ್ಷಣಗಳಿವೆ. ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಸೇರಿಕೊಳ್ಳುವ ಮತ್ತು ಸೂಕ್ತ ಅನುಮತಿ ಪಡೆಯುವ ವಿಷಯದಲ್ಲಿ ಮೂರು ವರ್ಷಗಳಿಂದ ಈ ಮೂರೂ ಕೋರ್ಸ್‌ಗಳ ಡಿಪ್ಲೊಮಾ ರದ್ದಾಗಿತ್ತು. ಇದೀಗ ಯುಯುಸಿಎಂಎಸ್‌ಗೆ ಸೇರ್ಪಡೆ ಮಾಡಲಾಗಿದ್ದು ಅಗತ್ಯ ಅನುಮತಿ ಸಿಗುತ್ತಿದೆ. ಈ ವರ್ಷದಿಂದ ಮತ್ತೆ ಒಂದು ವರ್ಷದ ಈ ಮೂರೂ ಡಿಪ್ಲೊಮಾ ಕೋರ್ಸ್ ಆರಂಭವಾಗಲಿವೆ ಎಂದು ಪುರಾತತ್ವ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ವೈ.ಸೋಮಶೇಖರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.