ಹೊಸಪೇಟೆ (ವಿಜಯನಗರ): ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೊಸಪೇಟೆ ತಾಲ್ಲೂಕು ಶೇ 63.29 ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೂ, ರಾಜ್ಯದ ಎರಡನೇ ರ‍್ಯಾಂಕ್, ಅಂದರೆ 624 ಅಂಕ ಗಳಿಸಿದ ರಾಜ್ಯದ 65 ವಿದ್ಯಾರ್ಥಿಗಳ ಪೈಕಿ ತಾಲ್ಲೂಕಿನವರೂ ಒಬ್ಬರು ಸೇರಿದ್ದಾರೆ.
ಬುಕ್ಕಸಾಗರ ಪಂಪ ವಿದ್ಯಾಪೀಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಯಶವಂತ ಸಿ.ಜಿ. 624 ಅಂಕ ಗಳಿಸಿದ್ದಾರೆ. ಈ ಮೂಲಕ ಜಿಲ್ಲೆಗೆ ಇವರೇ ಟಾಪರ್. ಇವರಿಗೆ ಇಂಗ್ಲಿಷ್‌ನಲ್ಲಿ ಮಾತ್ರ ಒಂದು ಅಂಕ ಬಂದಿದೆ. ನಗರದ ಜೇಸಿಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಎನ್.ಆರ್. ಅಭಿಷೇಕ್ 621 ಅಂಕ ಗಳಿಸಿದ್ದಾರೆ. ಮರಿಯಮ್ಮನಹಳ್ಳಿಯ ಪ್ರಾರ್ಥನಾ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಕೆ.ಅಮೂಲ್ಯಾ 620 ಅಂಕ ಗಳಿಸಿದರು.
ತಾಲ್ಲೂಕಿನಲ್ಲಿ 2,485 ಬಾಲಕರು ಹಾಗೂ 2,764 ಬಾಲಕಿಯರು ಸೇರಿ ಒಟ್ಟು 5,249 ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 1,347 ಬಾಲಕರು ಹಾಗೂ 1,975 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ 71.45ರಷ್ಟಿದ್ದರೆ, ಬಾಲಕರದು ಶೇ 54.21ರಷ್ಟಿದೆ.
ಎಂ.ಪಿ.ಪ್ರಕಾಶ್ ನಗರದ ಶ್ರೀ ಮಾರ್ಕಂಡೇಶ್ವರ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಯಶೋದಾ ದಾಸರ್ ಶೇ 98.56 ಅಂಕ ಗಳಿಸಿ ಗಮನ ಸೆಳೆದರು. ಈ ಶಾಲೆಗೆ ಶೇ 99ರಷ್ಟು ಫಲಿತಾಂಶ ಬಂದಿದೆ.
ನಿಜವಾಧ ಫಲಿತಾಂಶ ಇದು: ‘ಕಳೆದ ವರ್ಷ 5 ಗ್ರೇಸ್ ಅಂಕ ಕೊಟ್ಟಿದ್ದರು. ಈ ವರ್ಷ ಅದು ಕೊಟ್ಟಿಲ್ಲ. ಈ ಬಾರಿ ಬಂದಿರುವುದೇ ನಿಜವಾದ ಫಲಿತಾಂಶ. ಹೊಸಪೇಟೆ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಜಾಸ್ತಿ ಇದೆ, ಮಕ್ಕಳ ಸಂಖ್ಯೆಯೂ ಅಧಿಕ. ಹೀಗಾಗಿ ಜಿಲ್ಲೆಯ ಫಲಿತಾಂಶಕ್ಕೆ ಹೋಲಿಸಿದರೆ ತಾಲ್ಲೂಕಿನ ಫಲಿತಾಂಶದಲ್ಲಿ ಕೊಂಚ ಇಳಿಕೆ ಕಾಣಿಸಿದೆ’ ಎಂದು ಬಿಇಒ ಶೇಖರ್ ಹೊರಪೇಟೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.