ಹೊಸಪೇಟೆ (ವಿಜಯನಗರ): 'ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದುಡಿಯುವ ವರ್ಗಕ್ಕೆ ರಕ್ಷಣೆ ನೀಡುವ ಸ್ಥಿತಿಯಲ್ಲಿ ಇಲ್ಲ. ಬದಲಿಗೆ ಕಾರ್ಪೊರೇಟ್ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿದು ಅತಿ ಹೆಚ್ಚು ಅವಧಿಯ ದುಡಿಮೆಗೆ ತಳ್ಳುವ ಪ್ರಯತ್ನ ಮಾಡುತ್ತಿವೆ’ ಎಂದು ಸಿಐಟಿಯು ಜಿಲ್ಲಾ ಸಂಚಾಲಕಿ ಕೆ.ನಾಗರತ್ನ ಆರೋಪಿಸಿದರು.
ಇಲ್ಲಿ ಗುರುವಾರ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ನೌಕರರ ಬೇಡಿಕೆಗಳಾದ ಸಂಬಳ, ಆರೋಗ್ಯ, ಪಿಂಚಣಿ ವಿಚಾರಗಳ ಕುರಿತಂತೆ ಹೆಚ್ಚಿನ ಗಮನ ಹರಿಸಲೇಬೇಕು. ಮೇ 20ರಂದು ದೇಶದ ಎಲ್ಲೆಡೆ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಸರ್ಕಾರಗಳು ಎಚ್ಚೆತ್ತು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.
ರಾಜ್ಯ ಕಾರ್ಯದರ್ಶಿ ಎಲ್.ಮಂಜುನಾಥ ಮಾತನಾಡಿ, ‘ಕೇಂದ್ರ ಸರ್ಕಾರ 29 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ 2015ರಲ್ಲಿ ಸಂಸತ್ತಿನಲ್ಲಿ ಚರ್ಚೆ ಇಲ್ಲದೆ ಅಂಗೀಕಾರವಾಧ ನಾಲ್ಕು ಸಂಹಿತೆ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದ್ದು, ಕಾರ್ಮಿಕ ವರ್ಗ ಇಲ್ಲದಂತೆ ಮಾಡುವ ಪ್ರಯತ್ನವಾಗಿದೆ’ ಎಂದರು.
ಸಿಐಟಿಯು ತಾಲ್ಲೂಕು ಮುಖಂಡ ಎಂ.ಗೋಪಾಲ್ ಧ್ವಜಾರೋಹಣ ನೆರವೇರಿಸಿದರು. ಎನ್.ಯಲ್ಲಾಲಿಂಗ, ಎಂ.ಜಂಬಯ್ಯ ನಾಯಕ, ಕರುಣಾನಿಧಿ, ಜೆ.ಪ್ರಕಾಶ್, ಸೈಯದ್ ಬಷೀರ್ ಅಹ್ಮದ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.