ADVERTISEMENT

ವಿಜಯನಗರ: ‘ಸ್ವಾಮಿತ್ವ’ ಯೋಜನೆಗೆ ಮಲಪನಗುಡಿ ಆಯ್ಕೆ

ಡ್ರೋನ್‌ನಿಂದ ಸರ್ವೆ; ಪ್ರಧಾನಿ ಮೂಲಕ ಆಸ್ತಿ ಕಾರ್ಡ್‌ ಹಂಚಿಕೆಗೆ ಸಿದ್ಧತೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಫೆಬ್ರುವರಿ 2022, 19:30 IST
Last Updated 24 ಫೆಬ್ರುವರಿ 2022, 19:30 IST
‘ಸ್ವಾಮಿತ್ವ’ ಯೋಜನೆಯಡಿ ಭಾರತೀಯ ಸರ್ವೆ ಇಲಾಖೆಯವರು ಹೊಸಪೇಟೆ ತಾಲ್ಲೂಕಿನ ಮಲಪನಗುಡಿ ತಾಂಡಾದಲ್ಲಿ ಡ್ರೋನ್‌ನಿಂದ ಸರ್ವೆ ಕಾರ್ಯ ಕೈಗೊಂಡರು
‘ಸ್ವಾಮಿತ್ವ’ ಯೋಜನೆಯಡಿ ಭಾರತೀಯ ಸರ್ವೆ ಇಲಾಖೆಯವರು ಹೊಸಪೇಟೆ ತಾಲ್ಲೂಕಿನ ಮಲಪನಗುಡಿ ತಾಂಡಾದಲ್ಲಿ ಡ್ರೋನ್‌ನಿಂದ ಸರ್ವೆ ಕಾರ್ಯ ಕೈಗೊಂಡರು   

ಹೊಸಪೇಟೆ (ವಿಜಯನಗರ): ಆಸ್ತಿ ಸಮೀಕ್ಷೆ ಕೈಗೊಳ್ಳುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ‘ಸ್ವಾಮಿತ್ವ’ ಯೋಜನೆಗೆ ತಾಲ್ಲೂಕಿನ ಮಲಪನಗುಡಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.

ರಾಜ್ಯದ ಒಟ್ಟು ಆರು ಜಿಲ್ಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಏಪ್ರಿಲ್‌ 24ರಂದು ನಡೆಯಲಿರುವ ಪಂಚಾಯತ್‌ರಾಜ್‌ ದಿವಸ್‌ ಕಾರ್ಯಕ್ರಮಕ್ಕೆ ಮಲಪನಗುಡಿ ಸೇರಿದಂತೆ ರಾಜ್ಯದ ಮೂರು ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ. ಈ ಪೈಕಿ ಅಂತಿಮವಾಗಿ ಒಂದು ಪಂಚಾಯಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವರು. ಮಲಪನಗುಡಿಗೆ ಮೋದಿ ಬರುವ ಸಾಧ್ಯತೆ ಹೆಚ್ಚಿರುವುದರಿಂದ ‘ಸ್ವಾಮಿತ್ವ’ ಯೋಜನೆಗೆ ಪಂಚಾಯಿತಿ ಆಯ್ಕೆ ಮಾಡಲಾಗಿದ್ದು, ತ್ವರಿತ ಗತಿಯಲ್ಲಿ ಕೆಲಸ ನಡೆಯುತ್ತಿದೆ. ಒಂದುವೇಳೆ ಪ್ರಧಾನಿ ಭೇಟಿ ಕೊಡುವುದು ಖಚಿತವಾದರೆ ಅವರ ಮೂಲಕವೇ ಫಲಾನುಭವಿಗಳಿಗೆ ಆಸ್ತಿ ಕಾರ್ಡ್‌ ಹಂಚಿಕೆ ಮಾಡಲು ಯೋಜಿಸಲಾಗಿದೆ.

ಯೋಜನೆಯಡಿ ಈಗಾಗಲೇ ಭಾರತೀಯ ಸರ್ವೆ ಇಲಾಖೆಯವರು ಮಲಪನಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಮಲಪನಗುಡಿ, ಹೊಸ ಮಲಪನಗುಡಿ, ಗಾಳೆಮ್ಮನಗುಡಿ, ಹೊಸ ಹಂಪಿ, ಕಡ್ಡಿರಾಂಪುರ ತಾಂಡಾ ಹಾಗೂ ಮಲಪನಗುಡಿ ತಾಂಡಾದಲ್ಲಿ ಡ್ರೋನ್‌ ಮೂಲಕ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸರ್ವೆ ಕಾರ್ಯ ಪೂರ್ಣಗೊಳಿಸಿದ್ದಾರೆ. ನಕಾಶೆಯೊಂದಿಗೆ ಎಲ್ಲ ಚಿತ್ರಗಳನ್ನು ರಾಜ್ಯದ ಸರ್ವೆ ಇಲಾಖೆಗೆ ಕಳಿಸಿಕೊಡುತ್ತಾರೆ. ಅಲ್ಲಿಂದ ಜಿಲ್ಲೆಗೆ ಬರುತ್ತದೆ.

ADVERTISEMENT

ಭೂ ದಾಖಲೆಗಳ ಇಲಾಖೆಯು ಜಿಲ್ಲಾ ಪಂಚಾಯಿತಿಯ ಸಹಭಾಗಿತ್ವದಲ್ಲಿ ಆಯಾ ಪಂಚಾಯಿತಿಗಳ ಪಿಡಿಒಗಳೊಂದಿಗೆ ಸೇರಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಸ್ತಿ ಗಡಿ ಗುರುತಿಸುತ್ತಾರೆ. ಒಂದು ವೇಳೆ ನ್ಯಾಯಾಲಯದಲ್ಲಿ ಯಾವುದಾದರೂ ವ್ಯಾಜ್ಯಗಳು ಬಾಕಿ ಇದ್ದಲ್ಲಿ ತೀರ್ಪು ಬರುವವರೆಗೆ ನಿರೀಕ್ಷಿಸಲಾಗುತ್ತದೆ. ಉಳಿದವುಗಳನ್ನು ಆದ್ಯತೆ ಮೇರೆಗೆ ಮಾಡುತ್ತಾರೆ.

ವಾಸ್ತವದಲ್ಲಿ ಮೊದಲ ಹಂತದಲ್ಲಿ ಈ ಯೋಜನೆಗೆ ಬಳ್ಳಾರಿ ಜಿಲ್ಲೆ ಆಯ್ಕೆಯಾಗಿತ್ತು. ಆದರೆ, ಪ್ರಧಾನಿ ಸಂಭಾವ್ಯ ಭೇಟಿ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಈ ಯೋಜನೆ ವಿಜಯನಗರ ಜಿಲ್ಲೆಯಲ್ಲಿ ಜಾರಿಯಾಗುತ್ತಿದ್ದು, ಅದು ಮಲಪನಗುಡಿ ಗ್ರಾಮ ಪಂಚಾಯಿತಿಗೆ ಒಲಿದಿದೆ. ಇದರ ಸಾಧಕ–ಬಾಧಕ ನೋಡಿಕೊಂಡು ಜಿಲ್ಲೆಯಾದ್ಯಂತ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತದೆ.

ಆಸ್ತಿ ಕಾರ್ಡ್‌ ಪ್ರಯೋಜನವೇನು?
ಕಂದಾಯ ಜಮೀನುಗಳಿಗೆ ಮಾತ್ರ ಪಹಣಿ ನೀಡಲಾಗುತ್ತದೆ. ಆದರೆ, ತಾಂಡಾಗಳು, ಗ್ರಾಮ ಠಾಣೆಯಲ್ಲದ ಪ್ರದೇಶದ ಜನರಿಗೆ ಯಾವುದೇ ರೀತಿಯ ಆಸ್ತಿ ದಾಖಲೆಗಳು ಇರುವುದಿಲ್ಲ. ಈ ಯೋಜನೆಯಡಿ ಸರ್ವೇ ನಡೆಸಿ, ನಿರ್ದಿಷ್ಟವಾಗಿ ಆಸ್ತಿ ಗುರುತಿಸಿ, ಸಂಬಂಧಿಸಿದವರಿಗೆ ಆಸ್ತಿ ಕಾರ್ಡ್‌ ವಿತರಿಸಲಾಗುತ್ತದೆ. ಅದರ ಮೂಲಕ ಅವರು ಬ್ಯಾಂಕುಗಳಲ್ಲಿ ಸಾಲ ಪಡೆಯಬಹುದು. ಎಲ್ಲರ ಆಸ್ತಿ ಕುರಿತ ಅಧಿಕೃತ ದಾಖಲೆಗಳು ಲಭ್ಯ ಇರುವುದರಿಂದ ಸರ್ಕಾರ ಯಾವುದೇ ಯೋಜನೆ ಜಾರಿಗೊಳಿಸಿದರೆ ಅದರ ಅನುಷ್ಠಾನ ಸುಲಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.