ADVERTISEMENT

ಕಾಯಿಲೆ ಸಂಕೋಲೆ | ಕಾರಿಗನೂರಿನಲ್ಲಿಲ್ಲ ಆಸ್ಪತ್ರೆ: ವೈದ್ಯಕೀಯ ಶಿಬಿರಗಳೇ ಆಸರೆ

ಎಂ.ಜಿ.ಬಾಲಕೃಷ್ಣ
Published 27 ಏಪ್ರಿಲ್ 2025, 6:52 IST
Last Updated 27 ಏಪ್ರಿಲ್ 2025, 6:52 IST
ಜಂಬುನಾಥಹಳ್ಳಿಯ ಗಣಿಬಾಧಿತ ಕ್ಯಾಂಪ್‌
ಜಂಬುನಾಥಹಳ್ಳಿಯ ಗಣಿಬಾಧಿತ ಕ್ಯಾಂಪ್‌   

ಹೊಸಪೇಟೆ (ವಿಜಯನಗರ): ನಗರದ ಒಳಗೆ ಮತ್ತು ಸುತ್ತಮುತ್ತ ಇರುವ ಗಣಿಬಾಧಿತ 18 ಕ್ಯಾಂಪ್‌ಗಳಲ್ಲಿ ವಾಸಿಸುತ್ತಿರುವ ಸಾವಿರಾರು ಮಂದಿ ನಾಲ್ಕೈದು ತಲೆಮಾರುಗಳಿಂದ ಗಣಿಗಾರಿಕೆಗೇ ತಮ್ಮ ಜೀವ ತೆತ್ತವರು. ಸಹಜವಾಗಿಯೆ ನಾನಾ ಬಗೆಯ ಕಾಯಿಲೆಗಳೂ ಅವರನ್ನು ಅಂಟಿಕೊಂಡು ಬಂದಿವೆ. ಆದರೆ ಕಾರಿಗನೂರಿನಲ್ಲಿ ಸರ್ಕಾರಿ ಆಸ್ಪತ್ರೆಯೇ ಇಲ್ಲ. 

ಕಾರಿಗನೂರಿನಲ್ಲಿ ನಗರ ಸಮುದಾಯ ಆರೋಗ್ಯ ಕೇಂದ್ರದ ಸ್ಥಾಪಿಸುವ ಬಗ್ಗೆ ಅಧಿಕಾರಿಗಳು, ಡಿಎಚ್‌ಒ ವರ್ಷದಿಂದೀಚೆಗೆ ಹೇಳುತ್ತಲೇ ಬರುತ್ತಿದ್ದಾರೆ, ಆದರೆ ಇದರ ಬಗ್ಗೆ ಯಾವ ಬೆಳವಣಿಗೆಯೂ ಆದದ್ದು ಕಾಣಿಸಿಲ್ಲ. ತಿಂಗಳಿಗೊಮ್ಮೆ ಕ್ಯಾಂಪ್‌ಗಳಲ್ಲಿ ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನೇ ನಂಬಿಕೊಂಡು ಇರಬೇಕಾಗಿದೆ, ಕೆಲವೊಮ್ಮೆ ಅದು ಸಹ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಹಲವು ಕ್ಯಾಂಪ್‌ಗಳಲ್ಲಿನ ಜನರು ತಮ್ಮ ಅಳಲು ತೋಡಿಕೊಂಡರು.

ಯಾವ ಕ್ಯಾಂಪ್‌ನಲ್ಲೂ ಸಮರ್ಪಕ ಶೌಚಾಲಯ ಇಲ್ಲ, ಒಳಚರಂಡಿ ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರೂ ಸಿಗುತ್ತಿಲ್ಲ. ಬಹುತೇಕ ಇದೇ ಕಾರಣಕ್ಕೆ ಅನಾರೋಗ್ಯ ಸಮಸ್ಯೆಯೂ ಇಲ್ಲಿನ ಜನರಿಗೆ ಹೆಚ್ಚೇ ಕಾಡುತ್ತಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಲೇ ಜನ ಅನಾರೋಗ್ಯದಿಂದ ಬಳಲುವಂತಾಗಿದೆ ಎಂಬುದು ನಿವಾಸಿಗಳ ದೂರು.

ADVERTISEMENT

ಇನ್ನಷ್ಟು ಕ್ಯಾಂಪ್‌ಗಳ ವಿವರ: ಬಳ್ಳಾರಿ ರಸ್ತೆಯ ಎಡಭಾಗದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಡಿಮಾರ್ಟ್‌ ಮಳಿಗೆಯ ಬದಿಯಲ್ಲೇ ಇರುವುದು ವಾಲ್ಮೀಕಿ ನಗರ ಗಣಿಬಾಧಿತ ಕ್ಯಾಂಪ್‌. ಕ್ಯಾಂಪ್‌ಗಳ ಪೈಕಿ ಇದು ಅತ್ಯಂತ ದೊಡ್ಡದು. ಇಲ್ಲಿ 350 ಕುಟುಂಬಗಳ 1,608 ಮಂದಿ ವಾಸ ಮಾಡುತ್ತಿದ್ದಾರೆ. ಇಲ್ಲಿನ ಸುಮಾರು 50 ಕುಟುಂಬಗಳಿಗೆ ಮಾತ್ರ ಆಶ್ರಯ ಮನೆಯ ಭಾಗ್ಯ ಸಿಕ್ಕಿದೆ. ಉಳಿದವರಿಗೆ ಉಳಿದ ಕ್ಯಾಂಪ್‌ಗಳ ಜನರು ಎದುರಿಸುತ್ತಿರುವ ಸಮಸ್ಯೆಯೇ ಕಾಡುತ್ತಿದೆ. ಜಂಬುನಾಥ ಹಳ್ಳಿ ಕ್ಯಾಂಪ್‌ನಲ್ಲಿ 51 ಕುಟುಂಬಗಳ 242 ಮಂದಿ ಹರಕಲು ಮನೆಯಲ್ಲಿ, ಹಕ್ಕುಪತ್ರ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ.

ಹಣಪಿನಕಟ್ಟ ಕ್ಯಾಂಪ್‌ನಲ್ಲಿ 819 ಜನಸಂಖ್ಯೆ ಇದ್ದು, 157 ಕುಟುಂಬಗಳಿವೆ. ಅಂಬೇಡ್ಕರ್ ನಗರ ಕ್ಯಾಂಪ್‌ನಲ್ಲಿ 521 ಜನಸಂಖ್ಯೆ ಇದ್ದು, 100 ಕುಟುಂಬಗಳಿವೆ. ಕಾರಿಗನೂರ್‌ ಕ್ಯಾಂಪ್‌ನಲ್ಲಿ 784 ಜನಸಂಖ್ಯೆ ಇದ್ದು, 169 ಕುಟುಂಬಗಳಿವೆ. ಕೊಟ್ರೇಶ್ವರ ನಗರ ಕ್ಯಾಂಪ್‌ನಲ್ಲಿ 492 ಜನಸಂಖ್ಯೆ ಇದ್ದು, 160 ಕುಟುಂಬಗಳಿವೆ. ಕಾರಿಗನೂರ್‌ ರೋಡ್‌ಸೈಡ್‌ ಕ್ಯಾಂಪ್‌ನಲ್ಲಿ 360 ಜನಸಂಖ್ಯೆ ಇದ್ದು, 83 ಕುಟುಂಬಳಿವೆ. ನೇಕಾರ ಕ್ಯಾಂಪ್‌ನಲ್ಲಿ 205 ಜನಸಂಖ್ಯೆ ಇದ್ದು, 61 ಕುಟುಂಬಳಿವೆ. ಗೋಂಧಳಿ ಕ್ಯಾಂಪ್‌ನಲ್ಲಿ 390 ಜನಸಂಖ್ಯೆ ಇದ್ದು, 90 ಕುಟುಂಬಗಳಿವೆ. 

ಎಲ್ಲ ಕ್ಯಾಂಪ್‌ಗಳ ಜನರ ನಿರೀಕ್ಷೆ ಕೆಎಂಇಆರ್‌ಸಿಯಿಂದ ಸಿಗಬಹುದಾದ ಅನುದಾನದಿಂದ ಆಗಬಹುದಾದ ಅಭಿವೃದ್ಧಿ ಕೆಲಸಗಳು. ನಾಲ್ಕೈದು ತಲೆಮಾರುಗಳಿಂದ ನಮ್ಮದು ನರಕ ಜೀವನವೇ ಆಗಿ ಹೋಯಿತು, ಇನ್ನಾದರೂ ನಮಗೊಂದು ಭದ್ರ ಸೂರು ಕಲ್ಪಿಸಿ ಎಂಬುದು ಎಲ್ಲರ ಒತ್ತಾಯವಾಗಿತ್ತು.

ಗಣಿಬಾಧಿತ ಕ್ಯಾಂಪ್‌ಗಳಲ್ಲೇ ದೊಡ್ಡದಾದ ಕಾರಿಗನೂರಿನ ವಾಲ್ಮೀಕಿನಗರ ಕ್ಯಾಂಪ್‌
ಕಾರಿಗನೂರಿನಲ್ಲಿ 30 ಹಾಸಿಗೆಗಳ ಅರ್ಬನ್‌ ಕಮ್ಯುನಿಟಿ ಹೆಲ್ತ್ ಸೆಂಟರ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಶೀಘ್ರ ಅದಕ್ಕೆ ಅನುಮತಿ ಸಿಗುವ ನಿರೀಕ್ಷೆ ಇದೆ
ಡಾ.ಎಲ್‌.ಆರ್.ಶಂಕರ್ ನಾಯ್ಕ್‌ ಡಿಎಚ್‌ಒ
ಮಳೆ ಬಂದರೆ ನೀರೆಲ್ಲ ಒಳಗೆ ಸುರಿಯುತ್ತಿದೆ. ಹಾವು ಚೇಳು ಮನೆಯೊಳಗೇ ಬರುತ್ತವೆ. ಚಿಕ್ಕಮಕ್ಕಳನ್ನು ಕಟ್ಟಿಕೊಂಡು ಸಾಗಿಸುವ ಬದುಕು ಬಹಳ ಕಷ್ಟಕರವಾಗಿದೆ. ನಮಗೆ ಸೂರು ಒದಗಿಸಿಕೊಡಿ
ನಾಗರತ್ನಮ್ಮ ಜಂಬುನಾಥಹಳ್ಳಿ ಕ್ಯಾಂಪ್‌ ನಿವಾಸಿ
ನನಗೆ ಬಿಪಿ ಶುಗರ್‌ ಸಮಸ್ಯೆ ತೀವ್ರವಾಗಿದೆ ಈಚೆಗೆ ವೈದ್ಯಕೀಯ ಕ್ಯಾಂಪ್‌ಗಳು ಸಹ ನಡೆಯುತ್ತಿಲ್ಲ. ನನ್ನಂತೆ 20ಕ್ಕಿಂತ ಅಧಿಕ ಮಂದಿ ಇಲ್ಲಿದ್ದಾರೆ. ಹೊಸಪೆಟೆಗೆ ಹೋಗಿ ಬರುವುದು ಬಹಳ ಕಷ್ಟವಾಗಿದೆ
ದೇವಮ್ಮ ಕಾರಿಗನೂರು ಕೆಎಂಎಂಐ ಕ್ಯಾಂಪ್‌ ನಿವಾಸಿ

ಕಸಕ್ಕೆ ಬೆಂಕಿ ಕೆಟ್ಟ ವಾಸನೆ

ಕಾರಿಗನೂರಿನಲ್ಲಿ ಊರ ಹೊರಗೆ ನಗರದ ಕಸ ವಿಲೇವಾರಿ ಮಾಡುವ ಡಂಪಿಂಗ್‌ ಯಾರ್ಡ್‌ ಇದೆ. ಅಲ್ಲಿ ಸಂಜೆಯಾಗುತ್ತಿದ್ದಂತೆಯೇ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಕೆಟ್ಟ ವಾಸನೆಯೊಂದ ಕೂಡಿದ ಈ  ಹೊಗೆ ಹಲವು ಕಿ.ಮೀ.ದೂರಕ್ಕೆ ಹೆಚ್ಚಿನ ಕ್ಯಾಂಪ್‌ ಪ್ರದೇಶಕ್ಕೆ ಹಾಗೂ ಇತರ ಜನವಸತಿ ಪ್ರದೇಶಗಳನ್ನು ಆವರಿಸಿಕೊಳ್ಳುತ್ತದೆ. ಇದರಿಂದ ಸಹ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತಿದೆ ಎಂದು ಹಲವು ನಿವಾಸಿಗಳು ದೂರಿದರು.

ವರ್ಷದ ಹಿಂದೆಯೇ ಮನವಿ

ಕಾರಿಗನೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಯಾಗಬೇಕು ಎಂದು ಕ್ಯಾಂಪ್‌ ನಿವಾಸಿಗಳು 2024ರ ಜನವರಿ 20ರಂದೇ ಡಿಎಚ್‌ಒ ಅವರಿಗೆ ಮನವಿ ನೀಡಿದ ಪ್ರತಿ ‘ಪ್ರಜಾವಾಣಿ’ಗೆ ಲಭಿಸಿದೆ. ಇದಕ್ಕಿಂತ ಒಂದು ವಾರ ಮೊದಲು ಕಾರಿಗನೂರಿನಲ್ಲಿ ವಾಂತಿಭೇದಿ ಸಂಭವಿಸಿತ್ತು. ‘ಇದುವರೆಗೂ ಸ್ಪಂದನೆಯೇ ಇಲ್ಲ.  ಈ ಭಾಗದ ಸುಮಾರು 9 ಸಾವಿರ ಗಣಿಬಾಧಿತರಿಗೆ ಹಾಗೂ ಪಿ.ಕೆ.ಹಳ್ಳಿ ಇಂಗಳಗಿ ವಡ್ಡರಹಳ್ಳಿ ಊರಿನ ಜನರಿಗೆ ಕೆಎಂಇಆರ್‌ಸಿ ಅನುದಾನದಲ್ಲಿ ತಕ್ಷಣ ಇಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಯಾಗಬೇಕು ಎಂಬುದೇ ನಮ್ಮ ಒತ್ತಾಯ’ ಎಂದು ಸ್ಥಳೀಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.