ಹೊಸಪೇಟೆ (ವಿಜಯನಗರ): ‘ಅನುವಾದವು ಕ್ರಿಯಾಶೀಲತೆಯನ್ನು ಬೇಡುವ ಕೆಲಸ. ಬಲಿಷ್ಠ ಸಮುದಾಯಗಳಿಗೆ ಅನುವಾದದ ಅಗತ್ಯವಿಲ್ಲದಿರಬಹುದು, ಆದರೆ ಹೊಸತನ್ನು ಬಯಸುವ, ಸ್ವೀಕರಿಸುವ ತಳ ಸಮುದಾಯಗಳಿಗೆ ಅಗತ್ಯವಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟಗಿರಿ ದಳವಾಯಿ ಹೇಳಿದರು.
ಕ್ಯಾಂಪಸ್‌ನಲ್ಲಿ ಶುಕ್ರವಾರ ಭಾಷಾಂತರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಂಡ ಪ್ರೊ.ಮೋಹನ ಕುಂಟಾರ್ ದತ್ತಿನಿಧಿ ಉದ್ಘಾಟನೆ, ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಅನುವಾದದ ಹೆಜ್ಜೆ ಗುರುತುಗಳು’ ಪುಸ್ತಕವು ಸಮಕಾಲೀನತೆ, ಒತ್ತಾಸೆ ಮತ್ತು ಒಳನೋಟಗಳನ್ನು ಕಟ್ಟಿಕೊಡುತ್ತದೆ. ಈ ಕೃತಿ ಓದುಗರು ಮತ್ತು ಓದಿನ ನಡುವಿನ ಸೂಕ್ಷ್ಮಗಳಿಗೆ ಮತ್ತು ಕನ್ನಡ, ತುಳು, ಮಲೆಯಾಳಂ ಅನುವಾದದ ಬಗೆಗಿನ ಪ್ರೀತಿ ಹಾಗೂ ನಿಷ್ಠುರತೆಗೆ ಧ್ವನಿಯಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ‘ಮೋಹನ ಕುಂಟಾರ್ ಅವರು ಭಾಷಾಂತರಕ್ಕೆ ವಿದ್ವತ್ ವಲಯದಲ್ಲಿ ಸ್ಥಾನ ಕಲ್ಪಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ’ ಎಂದರು.
ಕುಲಸಚಿವ ಪ್ರೊ. ವಿಜಯ್ ಪೂಣಚ್ಚ ತಂಬಂಡ, ದ್ರಾವಿಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ವೆಂಕಟೇಶ್ ಅವರು ಕುಂಟಾರ್ ಅವರ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟರು.
ದತ್ತಿನಿಧಿ ಸ್ಥಾಪಕರಾದ ಪ್ರೊ.ಸೌಮ್ಯಲತಾ ಪಿ., ಧಾರವಾಡದ ವಿಶ್ವನಾಥ ನಾಗರಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.