ADVERTISEMENT

ನಾಗೇಂದ್ರಗೆ ಸಚಿವ ಸ್ಥಾನ ನೀಡಿದರೆ ಸ್ವಾಗತ: ಇ. ತುಕರಾಂ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 7:22 IST
Last Updated 13 ಜನವರಿ 2026, 7:22 IST
ಇ.ತುಕಾರಾಂ
ಇ.ತುಕಾರಾಂ   

ಹೊಸಪೇಟೆ (ವಿಜಯನಗರ): ‘ಸ್ವಚ್ಛ ವರ್ಚಸ್ಸು ಇರುವವರಿಗೆ ಮಂತ್ರಿ ಸ್ಥಾನ ನೀಡಿ ಎಂದು ನಾನು ಪ್ರತಿಪಾದಿಸುತ್ತ ಬಂದಿರುವುದು ನಿಜ, ಮುಂದಿನ ಸಂಪುಟ ವಿಸ್ತರಣೆ ವೇಳೆ ಬಿ.ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿದರೆ ನಾನು ಅದನ್ನು ಸ್ವಾಗತಿಸುವೆ’ ಎಂದು ಸಂಸದ ಇ.ತುಕರಾಂ ಹೇಳಿದರು.

ಇಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನನಗೆ ಮಂತ್ರಿ ಸ್ಥಾನ ನೀಡದೆ ನಾಗೇಂದ್ರ ಅವರಿಗೆ ನೀಡಿದಾಗಲೂ ನಾನು ಏನೂ ಹೇಳಿರಲಿಲ್ಲ, ಪಕ್ಷದ ಶಿಸ್ತಿನ ಸಿಪಾಯಿ ನಾನು, ಪಕ್ಷ ಹೇಳಿದ್ದಕ್ಕೇ ನಾನು ಎಂಪಿ ಸ್ಥಾನಕ್ಕೆ ಸ್ಪರ್ಧಿಸಿದೆ. ಈಗಲೂ ಅಷ್ಟೇ, ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ನನ್ನ ಸಹಮತ ಇರುತ್ತದೆ’ ಎಂದರು. 

ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೆಸರು, ಸ್ವರೂಪ ಬದಲಿಸಲು ಹೊರಟಿರುವುದು ತಪ್ಪು, ಇದರ ವಿರುದ್ಧ ಪಕ್ಷ ಸಂಘಟಿತವಾಗಿ ಹೋರಾಟ ನಡೆಸಲಿದೆ. ಒಂದು ಅಣೆಕಟ್ಟೆ ನಿರ್ಮಿಸದ, ಒಂದು ಉದ್ಯಮ ಸ್ಥಾಪಿಸದ ಕೇಂದ್ರ ಸರ್ಕಾರ ಕಳೆದ 11 ವರ್ಷಗಳಲ್ಲಿ ₹150 ಲಕ್ಷ ಕೋಟಿ ಸಾಲ ಮಾಡಿದ್ದಷ್ಟೇ ಸಾಧನೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಲು ಸಿದ್ಧರಿಲ್ಲದ ಮೋದಿ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ನರೇಗೇ ಹೆಸರು ಬದಲಿಸಿದ್ದು ಮಾತ್ರವಲ್ಲ, ರಾಜ್ಯದಿಂದಲೂ ಪಾಲು ಕೇಳಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ’ ಎಂದರು.

ADVERTISEMENT

ಮೇ ಒಳಗೆ ಗೇಟ್‌: ತುಂಗಭದ್ರಾ ಕ್ರೆಸ್ಟ್‌ಗೇಟ್‌ಗಳನ್ನು ಮೇ ಅಂತ್ಯುದೊಳಗೆ ಅಳವಡಿಸುವ ವಿಶ್ವಾಸ  ಇದೆ ಎಂದ ಅವರು, ಎರಡನೇ ಬೆಳೆಯನ್ನು ಕೈಬಿಟ್ಟ ರೈತರು ಈಗಿನ ಪರಿಸ್ಥಿತಿಗೆ ಸ್ಪಂದಿಸಿದ್ದಕ್ಕೆ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.