ADVERTISEMENT

ಸಾಮಾಜಿಕ ಸಮಸ್ಯೆಗೆ ಅಕಾಡೆಮಿಕ್‌ ವಲಯದ ಮೌನ ಸಲ್ಲದು- ತೇಜಸ್ವಿ ವಿ. ಕಟ್ಟೀಮನಿ

ಹಂಪಿ ಕನ್ನಡ ವಿ.ವಿ 30ನೇ ನುಡಿಹಬ್ಬದಲ್ಲಿ ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿ.ವಿ. ಕುಲಪತಿ ತೇಜಸ್ವಿ ವಿ. ಕಟ್ಟೀಮನಿ ಖಡಕ್‌ ಮಾತು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಏಪ್ರಿಲ್ 2022, 9:52 IST
Last Updated 13 ಏಪ್ರಿಲ್ 2022, 9:52 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬದಲ್ಲಿ ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ವಿ. ಕಟ್ಟೀಮನಿ ಅವರು ಘಟಿಕೋತ್ಸವ ಭಾಷಣ ಮಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬದಲ್ಲಿ ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ವಿ. ಕಟ್ಟೀಮನಿ ಅವರು ಘಟಿಕೋತ್ಸವ ಭಾಷಣ ಮಾಡಿದರು   

ಕಮಲಾಪುರ (ಹೊಸಪೇಟೆ/ವಿಜಯನಗರ): ‘ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳು ಇಂದಿಗೂ ಕಾಯಂ ಬರಗಾಲದಿಂದ ನರಳುತ್ತಿವೆ. ಗುಳೇಯಿಂದಾಗಿ ಅನೇಕ ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗಿವೆ. ಇದರ ಬಗ್ಗೆ ನಮ್ಮ ಅಕಾಡೆಮಿಕ್‌ ವಲಯ ಮೌನ ವಹಿಸಿರುವುದು ಕ್ಷೇಮವಲ್ಲ’ ಎಂದು ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ವಿ. ಕಟ್ಟೀಮನಿ ಆಕ್ಷೇಪಿಸಿದರು.

ಮಂಗಳವಾರ ಸಂಜೆ ನಡೆದ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯ 30ನೇ ನುಡಿಹಬ್ಬದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

ಕೊಪ್ಪಳ, ಯಾದಗಿರಿ ಜಿಲ್ಲೆಯ ಬಡಜನರು ಅನ್ನ ಹುಡುಕುತ್ತ ಗುಳೇ ಹೋಗುತ್ತಾರೆ. ಮಕ್ಕಳ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲುತ್ತದೆ. ಅವರ ಸಂಬಂಧಿಕರು ಕಾಣೆಯಾಗುವುದು ನಿತ್ಯದ ಪಾಡಾಗಿದೆ. ನಮ್ಮ ಸಂಶೋಧನೆಗಳು ತಳಮಟ್ಟದ ಅಧ್ಯಯನ, ನಂಬಲರ್ಹ ಅಂಕಿ ಸಂಖ್ಯೆ ಕ್ರೋಢೀಕರಿಸಿ, ಸೂಕ್ತ ಪರಿಹಾರದ ಉಪಾಯಗಳನ್ನು ನೀಡಲು ಸಾಧ್ಯವಾದರೆ, ಸರ್ಕಾರ ಪರಿಹಾರದ ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ಮೂಲಕ ರಾಜ್ಯದ ಪ್ರಗತಿಯ ಜೊತೆಗಾರನಾಗಲು ನಮಗೆ ಸಾಧ್ಯವಿದೆ ಎಂದು ಹೇಳಿದರು.

ADVERTISEMENT

ನಮ್ಮ ಪಠ್ಯಕ್ರಮವನ್ನು ಪ್ರತಿವರ್ಷ ಬದಲಾಯಿಸಬೇಕು. ಪರಿಷ್ಕರಣೆ ಮಾಡಬೇಕು. ಶಿಕ್ಷಕರು ನಿರಂತರ ಅಧ್ಯಯನ, ತರಬೇತಿ ಪಡೆದು, ಕನ್ನಡ ಓದುವವರ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಡಬೇಕು. ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಔಷಧಿ, ವೈದ್ಯಕೀಯ ವಿಜ್ಞಾನ, ಆರೋಗ್ಯಶಾಸ್ತ್ರ ತ್ವರಿತಗತಿಯಿಂದ ಬದಲಾಗುತ್ತಿವೆ. ಇವತ್ತಿನ ಸಂಜೀವಿನಿಯಂಥ ಔಷಧ ಪದ್ಧತಿ ನಾಳೆ ಮೂಲೆಗುಂಪಾಗುತ್ತಿದೆ ಎಂದರು.

ಅಲೋಪತಿ ವೈದ್ಯಕೀಯದ ಅಪಪ್ರಚಾರದಲ್ಲಿ ಮೂಲೆಗುಂಪಾಗಿದ್ದ ಭಾರತೀಯ ವೈದ್ಯ ಪದ್ಧತಿ, ಆಯುರ್ವೇದ, ಯೋಗ, ಪ್ರಾಣಾಯಾಮ, ಬುಡಕಟ್ಟು ಗಿಡಮೂಲಿಕೆ ಜ್ಞಾನ, ತಮ್ಮ ಅಸಲಿ ವೈದ್ಯಕೀಯ ಜ್ಞಾನವನ್ನು ಕೋವಿಡ್ ಸಂಕಟದ ಕಾಲದಲ್ಲಿ ಸಾಬೀತು ಮಾಡಿವೆ. ಭಾರತೀಯ ಜ್ಞಾನ ಪರಂಪರೆಯ-ತುಳಸಿ ಎಲೆ, ಅಲ್ಲ, ಬೆಲ್ಲ, ಶುಂಠಿ, ಮೆಣಸು, ಲವಂಗ, ಅಜ್ವಾನ, ಸೋಂಪು ತಮ್ಮ ವೈದ್ಯಕೀಯ ಉಪಯುಕ್ತತೆಯನ್ನು, ಕಾಲಾತೀತ ಗುಣವನ್ನು ದೃಢಪಡಿಸಿವೆ. ನಮ್ಮ ಪಠ್ಯಕ್ರಮ, ಪಠ್ಯಪುಸ್ತಕಗಳು ಈ ಕಾಲಾತೀತ ಸೌಖ್ಯದ ಗುಣ ಹೊಂದಿರುವ ಹಿತ್ತಲ ಗಿಡದ ಮದ್ದನ್ನು ಬಳಸಿಕೊಳ್ಳಬೇಕು. ಅದರ ಮುಖೇನ ನಮ್ಮ ಶೈಕ್ಷಣಿಕ ವಲಯದ ಅಸ್ತಿತ್ವ ಗಟ್ಟಿಗೊಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡ ವಿಶ್ವವಿದ್ಯಾಲಯ ಬಹುಶಾಸ್ತ್ರೀಯ, ಅಂತರ್‌ ಶಾಸ್ತ್ರೀಯ ಸಂಸ್ಥೆಯಾಗಿ ಬೆಳೆಯಬೇಕು. ಯಾವ ವಿಭಾಗವೂ/ಶಾಸ್ತ್ರವು ನಡುಗಡ್ಡೆಯಾಗಿ ಬದುಕುಳಿಯಲು ಸಾಧ್ಯವಿಲ್ಲ. ಶಾಸನಶಾಸ್ತ್ರದ ಎಂ.ಎ. ವಿದ್ಯಾರ್ಥಿ ರಸಾಯನಶಾಸ್ತ್ರ ಕೂಡ ಓದುವ ತೆರೆದ ಆಯ್ಕೆಯ ಮುಕ್ತ ಅವಕಾಶವನ್ನು ನಾವು ಕಲ್ಪಿಸಬೇಕು. ಸಮಾಜಶಾಸ್ತ್ರದ ಅಧ್ಯಾಪಕ ಮಳೆ ನೀರು ಕೊಯ್ಲು ತಂತ್ರಜ್ಞಾನದ ಮೇಲೆ ಸಂಶೋಧನೆ ಮಾಡುವ, ಪ್ರಾತ್ಯಕ್ಷಿಕೆ ನಿರ್ವಹಿಸುವ ಚಾಕಚಕ್ಯತೆಯನ್ನು ಹೊಂದಬೇಕು ಎಂದರು.

ಹೊಸ ಹೊಸ ಅಧ್ಯಯನ, ಅವಶ್ಯಕತೆಗಳಿಗೆ ನಾವು ನಮ್ಮ ಬುದ್ಧಿ ಮತ್ತು ಹೃದಯವನ್ನು ತೆರೆದಿಟ್ಟಾಗ ಮಾತ್ರ ಹೊಸ ಬದುಕು ಸಾಧ್ಯವಾಗಬಲ್ಲದು. ಈ ನಮ್ಮ ತೆರೆದ ಹೃದಯ ಮತ್ತು ಬುದ್ಧಿ, ಕನ್ನಡ ಓದುವ ಮಕ್ಕಳ ಭವಿಷ್ಯವನ್ನು ನಿರ್ಮಾಣ ಮಾಡಬಲ್ಲದು. ಗಣಿಗಾರಿಕೆಯ ನಂತರದ ಪುನರ್ವಸತಿ, ಕಾಡಿನ ಮರುಹುಟ್ಟು, ಜಲಮೂಲಗಳ ಸಂರಕ್ಷಣೆ ವಿಷಯ ಕನ್ನಡ ವಿಶ್ವವಿದ್ಯಾಲಯದ ಕೋರ್ಸುಗಳ ಅವಿಭಾಜ್ಯ ಅಂಗವಾದಾಗ, ಸಮಾಜ ಮತ್ತು ವಿಶ್ವವಿದ್ಯಾಲಯದ ಮಧ್ಯೆ ಇರುವ ಅಂತರ ಕಡಿಮೆಯಾಗಲು ಸಾಧ್ಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.