ಹೊಸಪೇಟೆ (ವಿಜಯನಗರ): ‘ಪಠ್ಯ ಪರಿಷ್ಕರಣೆಯ ವಿಚಾರದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಲ್ಲದೇ ಅದನ್ನು ಸಮರ್ಥಿಸಿಕೊಂಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ರಾಜೀನಾಮೆಗೆ ಆಗ್ರಹಿಸಿ ಜುಲೈ 1ರಿಂದ ರಾಜ್ಯದಾದ್ಯಂತ ಧರಣಿ, ಪ್ರತಿಭಟನೆ ನಡೆಸಲಾಗುವುದು’ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದರು.
‘ಸರ್ಕಾರದ ಆದೇಶವಿಲ್ಲದೇ ಅನನುಭವಿ ರೋಹಿತ್ ಚಕ್ರತೀರ್ಥ ಅವರಿಂದ ಪಠ್ಯ ಪರಿಷ್ಕರಣೆ ನಡೆಸಿದ್ದು ಅಕ್ಷಮ್ಯ. ಅಷ್ಟೇ ಅಲ್ಲ, ಪರಿಷ್ಕರಣೆಯ ನೆಪದಲ್ಲಿ ಅನೇಕ ಮಹಾಪುರುಷರ ಚರಿತ್ರೆಯನ್ನು ತಿರುಚಿ ಅಪಚಾರ ಎಸಗಿದ್ದು ಖಂಡನೀಯ. ಮುಖ್ಯಮಂತ್ರಿಗಾಗಲಿ, ಸಚಿವರಿಗಾಗಲಿ ಗೊತ್ತಿಲ್ಲದೇ ಸರ್ಕಾರದ ಕೆಲಸದಲ್ಲಿ ಯಾರು ಬೇಕಾದರೂ ಹಸ್ತಕ್ಷೇಪ ಮಾಡಬಹುದು ಎನ್ನುವುದಕ್ಕೆ ಈ ಪ್ರಕರಣ ತಾಜಾ ನಿದರ್ಶನ. ಮುಖ್ಯಮಂತ್ರಿಯವರು ತಡವಾಗಿಯಾದರೂ ಪರಿಷ್ಕರಿಸುವ ಪಠ್ಯ ತಿದ್ದುವಂತೆ ಆದೇಶ ಹೊರಡಿಸಿದ್ದಾರೆ. ಆದರೆ, ಇಡೀ ಪ್ರಕರಣದಲ್ಲಿ ಹೊಣೆಗೇಡಿತನ ಪ್ರದರ್ಶಿಸಿರುವ ಸಚಿವ ನಾಗೇಶ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಕೋವಿಡ್‌ನಿಂದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಉಂಟಾಗಿದೆ. ಈಗ ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಕೆಯಾಗದ ಕಾರಣ ಅವರ ಓದಿಗೆ ಮತ್ತಷ್ಟು ಹಿನ್ನಡೆಯಾಗಿದೆ. ಸರ್ಕಾರದ ವಿವೇಚನಾರಹಿತ ನಿರ್ಧಾರದಿಂದ ಹೀಗಾಗಿದೆ. ಇದರ ಸಂಪೂರ್ಣ ಹೊಣೆ ಹೊತ್ತುಕೊಂಡು ಶಿಕ್ಷಣ ಸಚಿವರು ರಾಜೀನಾಮೆ ಕೊಡಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಯವರು ವಜಾಗೊಳಿಸಬೇಕು’ ಎಂದು ಹೇಳಿದರು.
ಸೇನೆಯಲ್ಲಿ ಖಾಲಿ ಹುದ್ದೆ ತುಂಬಿ:‘ಅಗ್ನಿಪಥ್ ಯೋಜನೆ ವೈಜ್ಞಾನಿಕವಾಗಿಲ್ಲ. ಸೇನೆಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದರೆ ಕೌಶಲ ಬರುವುದಿಲ್ಲ. ಅಗ್ನಿಪಥ್‌ನಿಂದ ದೇಶದ ಭದ್ರತೆಗೆ ಅಪಾಯವಿದೆ. ಕಡಿಮೆ ಸಂಬಳಕ್ಕೆ ಸೇನೆಯಲ್ಲಿ ಯುವಕರನ್ನು ದುಡಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಾದ ತೀರ್ಮಾನವಲ್ಲ. ಸೈನ್ಯದಲ್ಲಿ 1 ಲಕ್ಷ 46 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ನಿಜವಾಗಿಯೂ ಸೈನ್ಯದ ಬಗ್ಗೆ ಕಾಳಜಿಯಿದ್ದರೆ ಆ ಹುದ್ದೆಗಳನ್ನು ಮೊದಲು ತುಂಬಬೇಕು’ ಎಂದು ಒತ್ತಾಯಿಸಿದರು.
‘ದೇಶದ 30 ರಾಜ್ಯಗಳಲ್ಲಿ 40 ಲಕ್ಷಕ್ಕಿಂತ ಅಧಿಕ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಉಳಿದಿವೆ. ಈ ಹುದ್ದೆಗಳನ್ನು ತುಂಬಿದರೆ 6 ಕೋಟಿ ಜನರ ತಲಾ ಆದಾಯ ಹೆಚ್ಚಾಗುತ್ತದೆ. ಅಗ್ನಿಪಥ್‌ನಲ್ಲಿ ನಾಲ್ಕು ವರ್ಷ ಕೆಲಸ ಮಾಡಿಸಿಕೊಂಡು ನಂತರ ಅವರನ್ನು ಬೀದಿಗೆ ತಳ್ಳುವುದು ಸರಿಯಲ್ಲ’ ಎಂದರು.
‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೋಮುವಾದವನ್ನು ಮುನ್ನಲೆಗೆ ತರುತ್ತಿವೆ. ಸಾರ್ವಜನಿಕ ಆಸ್ತಿಯನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವುದರ ಮೂಲಕ ಜನರಿಗೆ ದ್ರೋಹವೆಸಗಲಾಗುತ್ತಿದೆ. ಬಡವರನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರ ಹೊಸ ಶಿಕ್ಷಣ ನೀತಿಯಲ್ಲಿದೆ. ಮತಾಂತರ ನಿಷೇಧ ಕಾಯ್ದೆ ಮೂಲಕ ಜಾತಿ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆ, ಹೊಸ ಕಾರ್ಮಿಕ ಸಂಹಿತೆ ಹಾಗೂ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಬೇಕು. ವಾಪಸ್ ಪಡೆಯುವವರೆಗೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಬಿ. ಮಾಳಮ್ಮ, ಆರ್.ಎಸ್. ಬಸವರಾಜ, ಜಿಲ್ಲಾ ಕಾರ್ಯದರ್ಶಿ ಆರ್. ಭಾಸ್ಕರ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮರಡಿ ಜಂಬಯ್ಯ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.