ADVERTISEMENT

ಮಸಣ ಕಾರ್ಮಿಕರಿಗೆ ಕನಿಷ್ಠ ವೇತನಕ್ಕೆ ಕಾಯ್ದೆ ತರಲಿ

ನವದೆಹಲಿಯ ದಲಿತ ಶೋಷಣ ಮುಕ್ತಿ ಮಂಚ್‌ನ ಅಖಿಲ ಭಾರತ ಉಪಾಧ್ಯಕ್ಷ ರಾಘವುಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 10:27 IST
Last Updated 24 ಜೂನ್ 2022, 10:27 IST
   

ಹೊಸಪೇಟೆ: ‘ಮಸಣ ಕಾರ್ಮಿಕರು ಈಗಲೂ ನಿಕೃಷ್ಟ ಬದುಕು ನಡೆಸುತ್ತಿದ್ದಾರೆ. ಅವರ ಪುನರ್ವಸತಿ, ಜೀವನ ಭದ್ರತೆಗೆ ಕೇಂದ್ರ ಸರ್ಕಾರ ಕಾಯ್ದೆ ರೂಪಿಸಿ, ಜಾರಿಗೆ ತರಬೇಕು’ ಎಂದು ನವದೆಹಲಿಯ ದಲಿತ ಶೋಷಣ್‌ ಮುಕ್ತಿ ಮಂಚ್‌ ಅಖಿಲ ಭಾರತ ಉಪಾಧ್ಯಕ್ಷ ಬಿ.ವಿ. ರಾಘವುಲು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದಿಂದ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮಸಣ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ವಿಶ್ವಗುರು ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಅನೇಕ ದೇಶಗಳು ಅವುಗಳ ಕಷ್ಟ ಪರಿಹಾರಕ್ಕೆ ಭಾರತಕ್ಕೆ ಬರುತ್ತಿವೆ ಎಂದೂ ಹೇಳುತ್ತಿದ್ದಾರೆ. ಆದರೆ, ಮಸಣ ಕಾರ್ಮಿಕರು ಹೇಗೆ ಜೀವನ ನಡೆಸುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿದೆಯೇ? ಸರ್ಕಾರಕ್ಕೆ ನಿಜವಾದ ಕಾಳಜಿಯಿದ್ದರೆ ಮಸಣ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು. ಅವರ ಕುಟುಂಬದವರ ಪುನರ್ವಸತಿಗೆ, ಇತರೆ ಸೌಲಭ್ಯ ಕಲ್ಪಿಸಲು ಕಾಯ್ದೆ ಜಾರಿಗೆ ತರಬೇಕು. ಆಗ ಮಸಣ ಕಾರ್ಮಿಕರ ಪರಿಸ್ಥಿತಿ ಸುಧಾರಿಸಬಹುದು ಎಂದು ಹೇಳಿದರು.

ADVERTISEMENT

ಪೌರ ಕಾರ್ಮಿಕರಿಗೆ ಸರ್ಕಾರದಿಂದ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ. ಅವರಿಗೂ ವೇತನ ನಿಗದಿಪಡಿಸಲಾಗಿದೆ. ಆದರೆ, ಮಸಣ ಕಾರ್ಮಿಕರನ್ನು ಈಗಲೂ ಅಸ್ಪೃಶ್ಯರಂತೆ ಸಮಾಜ ಹಾಗೂ ಸರ್ಕಾರ ನೋಡುತ್ತಿದೆ. ಈ ಧೋರಣೆ ಬದಲಾಗಬೇಕು. ಮಸಣ ಕಾರ್ಮಿಕರಿಗೂ ಘನತೆಯ ಬದುಕು ನಡೆಸಬೇಕೆಂಬ ಆಸೆ ಇದೆ. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಇದರಿಂದ ಹೊರಬರಬೇಕೆಂಬ ಮಹದಾಸೆ ಇದೆ. ಆದರೆ, ಸರ್ಕಾರ ಮಸಣ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುತ್ತಿಲ್ಲ. ವಸತಿ ಶಾಲೆಗಳನ್ನು ಆರಂಭಿಸಿಲ್ಲ. ಒಂದುವೇಳೆ ಮಸಣ ಕಾರ್ಮಿಕರ ಮಕ್ಕಳು ವಿದ್ಯಾವಂತರಾದರೆ ಶವ ಸಂಸ್ಕಾರ ಮಾಡುವವರು ಯಾರೂ ಸಿಗುವುದಿಲ್ಲ ಎಂಬ ಭಾವನೆ ಸರ್ಕಾರಕ್ಕೆ ಬಂದಿದೆಯಾ? ಎಂದು ಪ್ರಶ್ನಿಸಿದರು.

ಕೋವಿಡ್‌ನಿಂದ ಅನೇಕ ಜನ ಬಂಧು ಬಾಂಧವರನ್ನು ಕಳೆದುಕೊಂಡಿದ್ದರು. ಆದರೆ, ಭಯ, ಆತಂಕದಿಂದ ಮೃತರ ಸಂಬಂಧಿಕರು ಶವ ಸಂಸ್ಕಾರಕ್ಕೂ ಬಂದಿರಲಿಲ್ಲ. ಆದರೆ, ಮಸಣ ಕಾರ್ಮಿಕರು ಅದನ್ನೆಲ್ಲ ಲೆಕ್ಕಿಸದೇ ಎಲ್ಲರ ಶವ ಸಂಸ್ಕಾರ ಮಾಡಿದ್ದರು. ಯಾವುದೇ ರೋಗ ರುಜಿನಗಳಿಂದ ಜನ ಸತ್ತರೂ ಒಂದು ಕ್ಷಣ ಹಿಂದೆ ಮುಂದೆ ನೋಡದೇ ಶವ ಸಂಸ್ಕಾರ ಮಾಡುತ್ತಾರೆ. ಪ್ರತಿಕೂಲ ಸನ್ನಿವೇಶದಲ್ಲಿ ಕೆಲಸ ನಿರ್ವಹಿಸಲು ಅನಿವಾರ್ಯವಾಗಿ ಮದ್ಯ ಸೇವಿಸುತ್ತಾರೆ. ಇಂತಹ ಸಾವಿರಾರು ಜನ ಮಸಣ ಕಾರ್ಮಿಕರಿಗೆ ಇದುವರೆಗೆ ಕನಿಷ್ಠ ವೇತನ ನಿಗದಿ ಮಾಡಲು ನಮ್ಮ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ರಾಜ್ಯ ಮಸಣ ಕಾರ್ಮಿಕರ ಸಂಘದ ಸಂಚಾಲಕ ಯು. ಬಸವರಾಜ ಮಾತನಾಡಿ, ರಾಜ್ಯದಲ್ಲಿ 50 ಸಾವಿರ ಮಸಣಗಳಿವೆ. 2.50 ಲಕ್ಷ ಮಸಣ ಕಾರ್ಮಿಕರು ನೂರಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸರ್ಕಾರವಾಗಲಿ, ಸಮಾಜವಾಗಲಿ ಅವರನ್ನು ಗುರುತಿಸಿಲ್ಲ. ಅವರ ನೋವು ಅರಿತಿಲ್ಲ. ಸರ್ಕಾರದ ಕಣ್ಣು ತೆರೆಸುವುದಕ್ಕಾಗಿಯೇ ಈ ಸಮಾವೇಶ ಸಂಘಟಿಸಲಾಗಿದೆ. ಬರುವ ದಿನಗಳಲ್ಲಿ ಹೋರಾಟದ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

ದಲಿತ ಹಕ್ಕುಗಳ ಸಮಿತಿ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ, ಮಸಣ ಕಾರ್ಮಿಕರು, ಪುನರ್ವಸತಿ ಕಲ್ಪಿತ ದೇವದಾಸಿಯರು, ಆದಿವಾಸಿಗಳು, ಜೀವ ವಿಮುಕ್ತರನ್ನು ಸಂಘಟಿಸಿ, ಸರ್ಕಾರದಿಂದ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಲು ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಸಂಘದ ಸಹ ಸಂಚಾಲಕಿ ಬಿ. ಮಾಳಮ್ಮ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್‌.ಎಸ್‌. ಬಸವರಾಜ, ಮುಖಂಡರಾದ ಮರಡಿ ಜಂಬಯ್ಯ ನಾಯಕ, ಆರ್‌. ಭಾಸ್ಕರ್‌ ರೆಡ್ಡಿ, ಕೆ. ನಾಗರತ್ನ, ಎ. ಕರುಣಾನಿಧಿ, ಸಿ. ವಿರೂಪಾಕ್ಷಪ್ಪ, ವಿ. ಸ್ವಾಮಿ, ಈಡಿಗರ ಮಂಜುನಾಥ ಇದ್ದರು. ಸಚಿವ ಆನಂದ್‌ ಸಿಂಗ್‌ ಗೈರಾಗಿದ್ದರು. ಸಮಾವೇಶಕ್ಕೂ ಮುನ್ನ ಮಸಣ ಕಾರ್ಮಿಕರು ನಗರದಲ್ಲಿ ರ್‍ಯಾಲಿ ನಡೆಸಿದರು.

‘ಮುಖ್ಯಮಂತ್ರಿ ಬಂದು ಮಾಡುತ್ತಾರೆಯೇ?’
‘ಮಸಣ ಕಾರ್ಮಿಕರು ಶವ ಸಂಸ್ಕಾರ ಮಾಡುವುದು ಬಿಟ್ಟರೆ ಅದನ್ನು ಮುಖ್ಯಮಂತ್ರಿ ಬಂದು ಮಾಡುತ್ತಾರೆಯೇ?’ ಹೀಗೆಂದು ನವದೆಹಲಿಯ ದಲಿತ ಶೋಷಣ್‌ ಮುಕ್ತಿ ಮಂಚ್‌ ಅಖಿಲ ಭಾರತ ಉಪಾಧ್ಯಕ್ಷ ಬಿ.ವಿ. ರಾಘವುಲು ಪ್ರಶ್ನಿಸಿದರು.
ಮೃತರ ಸಂಬಂಧಿಕರು ಕೊಡುವ ಬಿಡಿಗಾಸಿನಲ್ಲಿ ಮಸಣ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಅವರು ಸಮಾಜದ ಭಾಗವಾಗಿದ್ದರೂ ಕೂಡ ಅವರಿಗೆ ಯಾವುದೇ ಸವಲತ್ತುಗಳಿಲ್ಲ. ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೆ. ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಹೋರಾಟದ ಮೂಲಕ ಬಡಿದೆಬ್ಬಿಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.