ADVERTISEMENT

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಅಕ್ರಮ ತಡೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 9:11 IST
Last Updated 22 ಸೆಪ್ಟೆಂಬರ್ 2022, 9:11 IST
   

ಹೊಸಪೇಟೆ (ವಿಜಯನಗರ): ಕಟ್ಟಡ ಕಾರ್ಮಿಕರೆಂದು ನಕಲಿ ದಾಖಲೆ ಸೃಷ್ಟಿಸಿ ಕಾರ್ಮಿಕ ಕಲ್ಯಾಣ ಮಂಡಳಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಶ್ರಮಿಕ ಭವನದಿಂದ ಕಾರ್ಮಿಕ ಇಲಾಖೆಯ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಅನಂತರ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ್‌ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಸ್ಥಳೀಯ ಅಧಿಕಾರಿಗೆ ಸಲ್ಲಿಸಿದರು.

ಸುಳ್ಳು ದಾಖಲೆಗಳನ್ನು ಕೊಟ್ಟು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಣಿಗೆ ನೆರವು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಕೊಳಚೆ ನಿರ್ಮೂಲನಾ ಮಂಡಳಿ ಸೇರಿದಂತೆ ಇತರೆ ವಸತಿ ಯೋಜನೆಯ ಫಲಾನುಭವಿಗಳನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಫಲಾನುಭವಿಗಳೆಂದು ನೋಂದಣಿ ಮಾಡಬಾರದು ಎಂದು ಆಗ್ರಹಿಸಿದರು.

ADVERTISEMENT

ಈಗಾಗಲೇ ಕೊಳಚೆ ನಿರ್ಮೂಲನಾ ಮಂಡಳಿಗೆ ಪಾವತಿಸಿರುವ ₹76 ಕೋಟಿ ಕಲ್ಯಾಣ ಮಂಡಳಿಯ ಖಾತೆಗೆ ಜಮೆ ಮಾಡಬೇಕು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಐದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಸದಸ್ಯತ್ವ ಹೊಂದಿರುವವರಿಗೆ ಮನೆ ನಿರ್ಮಾಣಕ್ಕೆ ನೆರವು ನೀಡಬೇಕು. ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು. ಕಲ್ಯಾಣ ಮಂಡಳಿಯಲ್ಲಿ ನೈಜ ಕಾರ್ಮಿಕರಿಗೆ ಪ್ರಾತಿನಿಧ್ಯ ಸಿಗಲು ಕಠಿಣ ನಿಯಮ ರೂಪಿಸಬೇಕೆಂದು ಒತ್ತಾಯಿಸಿದರು.

ಫೆಡರೇಶನ್‌ ಜಿಲ್ಲಾ ಅಧ್ಯಕ್ಷ ಎನ್‌. ಯಲ್ಲಾಲಿಂಗ, ಮುಖಂಡರಾದ ಆರ್‌. ಭಾಸ್ಕರ್‌ ರೆಡ್ಡಿ, ಮರಡಿ ಜಂಬಯ್ಯ ನಾಯಕ, ಗೋಪಾಲ, ಮಂಜುನಾಥ ಸೇರಿದಂತೆ ಕಟ್ಟಡ ಕಾರ್ಮಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.