ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಮುಂಗಾರು ಮಳಯ ಆರಂಭ ಭರ್ಜರಿಯಾಗಿಯೇ ಆಗಿದ್ದು, ಜೂನ್ ತಿಂಗಳು ಮೊದಲ 12 ದಿನಗಳಲ್ಲಿ ಶೇ 55ರಷ್ಟು ಅಧಿಕ ಮಳೆ ಆಗಿರುವುದು ದಾಖಲೆಗಳಿಂದ ಗೊತ್ತಾಗಿದೆ.
ಜೂನ್ 1ರಿಂದ 12ವರೆಗೆ ವಾಡಿಕೆಯ 37.7 ಮಿ.ಮೀ.ಬದಲಿಗೆ 56.9 ಮಿ.ಮೀ ಮಳೆ ಆಗಿದೆ. ಎಲ್ಲಾ 18 ಹೋಬಳಿಗಳಲ್ಲಿ ಉತ್ತಮ ಮಳೆಯಾಗಿದ್ದು, ಹಗರಿಬೊಮ್ಮನಹಳ್ಳಿ , ಹಂಪಸಾಗರ, ಹೊಸಪೇಟೆ ಕಸಬಾ, ಕೂಡ್ಲಿಗಿ ಕಸಬಾ ಹೋಬಳಿಗಳಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಕಳೆದ 7 ದಿನಗಳಲ್ಲಿ 20.1 ಮಿ.ಮೀ.ವಾಡಿಕೆ ಮಳೆಗೆ ಬದಲಾಗಿ 51.2 ಮಿ.ಮೀ.ಮಳೆಯಾಗಿದೆ (ಶೇ 155ರಷ್ಟು) ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಂ.ಎಸ್.ದಿವಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೇ 41ರಷ್ಟು ಬಿತ್ತನೆ: ಉತ್ತಮ ಮಳೆಯಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಶೇ 41ರಷ್ಟು ಆಗಿದೆ. ಮುಖ್ಯವಾಗಿ ಮುಸುಕಿನಜೋಳ ಒಂದು ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಉಳಿದಂತೆ ಜೋಳ, ಸಜ್ಜೆ ಸೂರ್ಯಕಾಂತಿ ದ್ವಿದಳ ಧಾನ್ಯಗಳ ಬಿತ್ತನೆ ನಡೆಯುತ್ತಿದೆ. ರೈತರಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ಸಹಾಯ ಧನದಲ್ಲಿ ಲಭ್ಯವಿದೆ. ರಸಗೊಬ್ಬರಗಳ ಲಭ್ಯತೆ ಸಾಕಷ್ಟು ಇದ್ದು, ರೈತರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ವಿನಂತಿ ಮಾಡಿದ್ದಾರೆ.
ಇತ್ತೀಚಿನ ಮಳೆಯಿಂದಾಗಿ 35 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದು, ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆಕಾರ್ಯ ನಡೆಸುತ್ತಿದ್ದಾರೆ. 13 ಮನೆಗಳಿಗೆ ಭಾಗಶ ಹಾನಿಯಾಗಿದ್ದು, ಎಲ್ಲರಿಗೂ ನಿಯಮಾನುಸಾರ ಪರಿಹಾರ ವಿತರಿಸಲಾಗಿದೆ.ಸಿಡಿಲು ಬಡಿದು ಜೀವಹಾನಿಯಾದ ಒಂದು ಕುಟುಂಬಕ್ಕೆ ಹಾಗೂ ಗಾಯಗೊಂಡ ಒಂದು ಕುಟುಂಬಕ್ಕೆ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದ್ದಾರೆ.
ಪೂರ್ವ ಮುಂಗಾರು ಹಂಗಾಮಿನಲ್ಲಿ ಹಾನಿಗೊಳಗಾದ 121.90 ಹೆಕ್ಟೇರ್ ಬೆಳೆಗೆ ಸರ್ವೇ ಮಾಡಿ ಫಲಾನುಭವಿಗಳ ವಿವರಗಳನ್ನು ಸರ್ಕಾರಕ್ಕೆ ವರದಿ ಮಾಡಲಾಗಿದ್ದು, ಸದ್ಯದಲ್ಲೇ ಪರಿಹಾರ ಪಾವತಿ ಮಾಡಲಾಗುವುದು ಎಂದು ಡಿ.ಸಿ ತಿಳಿಸಿದ್ದಾರೆ.
ಸಹಾಯವಾಣಿ ವಿವರ: ಜಿಲ್ಲಾಧಿಕಾರಿ ಕಚೇರಿ– 1077, 08394-200328, ತಾಲ್ಲೂಕು ಕಚೇರಿ ಹೊಸಪೇಟೆ 08394-224208, ಹಗರಿಬೊಮ್ಮನಹಳ್ಳಿ 08397-238255, ಕೂಡ್ಲಿಗಿ 08391-220225, ಕೊಟ್ಟೂರು 08391-225400, ಹಡಗಲಿ 08399-240238, ಹರಪನಹಳ್ಳಿ 08398-286260 (8095258337).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.