ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸ್ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿದ್ದು, ಒಂದು ಪ್ರಕರಣದಲ್ಲಿ ₹1.92 ಲಕ್ಷ ಮೌಲ್ಯದ 7,410 ಕೆ.ಜಿ. ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದ ಚಾಲಕ ಬಸವರಾಜ ಪೊಲೀಸ್ ಪಾಟೀಲ್ ಎಂಬಾತನನ್ನು ಬಂಧಿಸಲಾಗಿದೆ. ಹೊಸಪೇಟೆಯ ಬಾಷಾ ಮತ್ತು ಇತರ ಕೆಲವರು ಸಹ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್.ಅವರು ಈ ಸಂಬಂಧ ಹೇಳಿಕೆ ನೀಡಿದ್ದು, ಸರ್ಕಾರದಿಂದ ಸಾರ್ವಜನಿಕರಿಗೆ ಹಂಚಿಕೆ ಮಾಡಲು ಪೂರೈಕೆಯಾಗಿದ್ದ ಅಕ್ಕಿ ಇದಾಗಿದೆ, ಅಕ್ರಮಕ್ಕೆ ಬಳಸಿದ್ದ ₹5 ಲಕ್ಷ ಮೌಲ್ಯದ ಟಾಟಾ ಗೂಡ್ಸ್ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕಮಲಾಪುರದ ಕುಪ್ಪಯ್ಯ ಕ್ಯಾಂಪ್ ಕಾಲುವೆ ಹತ್ತಿರದ ಶೆಡ್ ಒಂದರ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳ ಜತೆಗೆ ದಾಳಿ ನಡೆಸಿದಾಗ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಅಕ್ಕಿಯನ್ನು ಟಾಟಾ ಗೂಡ್ಸ್ ವಾಹನದಲ್ಲಿ ಸಾಗಣೆ ಮಾಡಲು ಯತ್ನಿಸುತ್ತಿದ್ದುದು ಕಂಡುಬಂತು ಎಂದು ಅವರು ತಿಳಿಸಿದ್ದಾರೆ.
ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂಪಿ ಸರ್ಕಲ್ ಇನ್‌ಸ್ಪೆಕ್ಟರ್ ರಾಜೇಶ್ ಬಟಗುರ್ಕಿ, ಕಮಲಾಪುರ ಠಾಣೆ ಪಿಎಸ್‌ಐ ಸಂತೋಷ್ ಡಬ್ಬಿನ್ ತನಿಖೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮಹಾಂತೇಶ್, ಗುರುಬಸವರಾಜ, ವಿವೇಕಾನಂದ ಪಾಲ್ಗೊಂಡಿದ್ದರು.
ಕೆಡಿಪಿ ಸಭೆಯ ಬಿಸಿ:
ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಸಂಸದ ಇ.ತುಕಾರಾಂ ಅವರು ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಪಡಿತರ ಅಕ್ಕಿಯ ಕಾಳಸಂತೆ ನಡೆಯುತ್ತಿರುವ ಬಗ್ಗೆ ಉಲ್ಲೇಖಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.