ADVERTISEMENT

ಪರಿಸರ ನಿಯಮ ಗಾಳಿಗೆ ತೂರಿತೇ ಕಂಪನಿ?

ಕಾರಿಗನೂರಿನ ಆರ್‌ಬಿಎಸ್ಎಸ್‌ಎನ್‌ ಗಣಿಗಾರಿಕೆ, ವಾಷಿಂಗ್ ಪ್ಲಾಂಟ್

ಎಂ.ಜಿ.ಬಾಲಕೃಷ್ಣ
Published 25 ಜೂನ್ 2025, 6:01 IST
Last Updated 25 ಜೂನ್ 2025, 6:01 IST
ಶಬ್ಬೀರ್ ಎಚ್‌.
ಶಬ್ಬೀರ್ ಎಚ್‌.   

ಹೊಸಪೇಟೆ (ವಿಜಯನಗರ): ನಗರದ ಹೊರವಲಯದ ಕಾರಿಗನೂರಿನಲ್ಲಿ ಹತ್ತಾರು ವರ್ಷಗಳಿಂದ ಗಣಿಗಾರಿಕೆ, ವಾಷಿಂಗ್‌ ಪ್ಲಾಂಟ್‌ ನಡೆಸುತ್ತ ಬಂದಿರುವ ಮೆ.ರಾಯ್‌ಬಹದ್ದೂರ್‌ ಸೇಠ್‌ ಶ್ರೀರಾಮ್‌ ನರಸಿಂಗದಾಸ್ ಕಂಪನಿ (ಆರ್‌ಬಿಎಸ್ಎಸ್ಎನ್‌) ಪರಿಸರ, ಅರಣ್ಯ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಗಂಭೀರ ದೂರು ಕೇಳಿಬಂದಿದೆ.

ನಗರದ ಸಾಮಾಜಿಕ ಕಾರ್ಯಕರ್ತ ಶಬ್ಬೀರ್ ಎಚ್‌. ಅವರು ಈ ಸಂಬಂಧ ಐದು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಪತ್ರ ಬರೆದಿದ್ದರು. ಇದೀಗ ಮತ್ತೊಮ್ಮೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ದೂರಿನ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಅರಣ್ಯ ಮತ್ತು ಜಿಲ್ಲಾ ಪರಿಸರ ಅಧಿಕಾರಿ ಅವರಿಗೆ ಸೋಮವಾರ ಸೂಚನೆ ನೀಡಿದ್ದಾರೆ.

ಶಬ್ಬೀರ್ ಅವರು ಜನವರಿಯಲ್ಲಿ ಬರೆದ ಪತ್ರದ ಬಳಿಕ ಗಣಿ ಗುತ್ತಿಗೆ ಪ್ರದೇಶ ಮತ್ತು ವಾಷಿಂಗ್ ಪ್ಲಾಂಟ್‌ ಜಾಗದ ಸ್ಥಳ ಪರಿಶೀಲನೆಗೆ ಸೂಚನೆ ನೀಡಲಾಗಿತ್ತು. ಮೂರು ತಿಂಗಳ ಬಳಿಕ ಅಂದರೆ ಮೇ 2ರಂದು ಉಪ ವಲಯ ಅರಣ್ಯಾಧಿಕಾರಿ ಎಚ್‌.ನಾಗರಾಜ್‌ ಅವರು ವಲಯ ಅರಣ್ಯಾಧಿಕಾರಿ ಅವರಿಗೆ ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ADVERTISEMENT

ವರದಿಯಲ್ಲಿ ಏನಿದೆ?: ‘ಆರ್‌ಬಿಎಸ್‌ಎಸ್ಎನ್‌ ಕಂಪನಿಯ ವಾಷಿಂಗ್‌ ಪ್ಲಾಂಟ್ ಇರುವ ಸ್ಥಳದಲ್ಲಿ ಒಂದು ಕಡೆ ಮೀಸಲು  ಅರಣ್ಯ ಪ್ರದೇಶದ ಕಾರಿಗನೂರು ಅರಣ್ಯ ಸರ್ವೆ ನಂ.192 ಬರುತ್ತದೆ. ಯಾವುದೇ ತಡೆಗೋಡೆ ನಿರ್ಮಿಸಿಲ್ಲ, ವಾಷಿಂಗ್‌ ಪ್ಲಾಂಟ್‌ನಿಂದ ಕಲುಷಿತ ನೀರು ಮೀಸಲು ಅರಣ್ಯದೊಳಗೆ ಬಸಿದು ಹೋಗುವ ಸಾಧ್ಯತೆ ಇದೆ. ತಡೆಗೋಡೆ ನಿರ್ಮಿಸದ ಕಾರಣ ಕಾಡು ಪ್ರಾಣಿಗಳು ಹೊಂಡದಲ್ಲಿ ಬೀಳುವ ಸಾಧ್ಯತೆ ಇದೆ. ಗಣಿ ಕಂಪನಿ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವದು ಕಡ್ಡಾಯ. ಗಣಿ ದೂಳಿನಿಂದ ಕೆಎಂಇಆರ್‌ಸಿ ಯೋಜನೆಯ 50 ಎಕರೆ ಫಿಟ್ ನೆಡುತೋಪಿನಲ್ಲಿ ಗಿಡಗಳ ಬೆಳವಣಿಗೆ ಕುಂಠಿತವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಪತ್ರ ನೋಡಿದರೆ ಕೆಲವೊಂದು ಷರತ್ತುಗಳನ್ನು ಕಂಪನಿ ಪಾಲಿಸದೆ ಇರುವುದು ಕಂಡುಬಂದಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಾರಿಗನೂರಿನಲ್ಲಿ ಬಳ್ಳಾರಿ–ಹೊಸಪೇಟೆ ಹೆದ್ದಾರಿ ಪಕ್ಕದಲ್ಲೇ ಕಾಣಿಸುವ ಆರ್‌ಬಿಎಸ್ಎಸ್ಎನ್‌ ಗಣಿಗಾರಿಕೆ ಪ್ರದೇಶ

ಇಂದು ಪರಿಸರ ಅಧಿಕಾರಿ ಭೇಟಿ

‘ಕಂಪನಿಯಿಂದ ಪರಿಸರ ಹಾನಿ ಉಲ್ಲಂಘನೆ ಆಗಿದ್ದ ಕುರಿತು ದೂರು ಬಂದಿರಲಿಲ್ಲ ಆದರೆ ಶಬ್ಬೀರ್‌ ಅವರು ನೀಡಿದ ದೂರಿನ ಮೇರೆಗೆ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ ಹಾಗೂ ವರದಿ ಸಲ್ಲಿಸಲಿದ್ದೇನೆ’ ಎಂದು ಪರಿಸರ ಅಧಿಕಾರಿ ಮೀನಾಕ್ಷಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.