ADVERTISEMENT

ನಿವೃತ್ತರಿಗೇಕೇ ಬೇಕು ಸಾಹಿತ್ಯ ಪರಿಷತ್ತು: ರಾಜಶೇಖರ ಮುಲಾಲಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 10:49 IST
Last Updated 11 ಮಾರ್ಚ್ 2021, 10:49 IST
ರಾಜಶೇಖರ ಮುಲಾಲಿ
ರಾಜಶೇಖರ ಮುಲಾಲಿ    

ವಿಜಯನಗರ (ಹೊಸಪೇಟೆ): ‘ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸರ್ಕಾರಿ ಕೆಲಸದಿಂದ ನಿವೃತ್ತರಾದವರಿಗೇನಿದೆ ಕೆಲಸ. ವಯಸ್ಸಾಗಿದೆ ಎಂದು ಸರ್ಕಾರವೇ ಅವರಿಗೆ ನಿವೃತ್ತಿ ಕೊಟ್ಟು ಕಳಿಸಿದೆ. ಹೀಗಿರುವಾಗ ನಿವೃತ್ತರಿಗೇಕೇ ಬೇಕು ಸಾಹಿತ್ಯ ಪರಿಷತ್ತು’ ಎಂದು ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಾಜಶೇಖರ ಮುಲಾಲಿ ಪ್ರಶ್ನಿಸಿದರು.

‘ನಿವೃತ್ತರಾದವರು ಗೆದ್ದರೆ ವಿಸಿಟಿಂಗ್‌ ಕಾರ್ಡ್‌ ಹಿಡಿದುಕೊಂಡು ವೈಯಕ್ತಿಕ ಕೆಲಸಕ್ಕಾಗಿ ಬಳಸಿಕೊಳ್ಳಬಹುದು. ನಿವೃತ್ತರಾದವರು, ರಾಜಕೀಯ ಪಕ್ಷದ ಹಿನ್ನೆಲೆ ಇಲ್ಲದವರು ಪರಿಷತ್ತಿನ ಅಧ್ಯಕ್ಷರಾಗಬೇಕು’ ಎಂದು ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಮಹೇಶ ಜೋಶಿ, ಶೇಖರಗೌಡ ಮಾಲಿಪಾಟೀಲ ಅವರ ಹೆಸರು ಪ್ರಸ್ತಾಪಿಸದೆ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಶೇಖರಗೌಡ ಮಾಲಿಪಾಟೀಲ ಅವರು ಕಾಂಗ್ರೆಸ್‌ ಪಕ್ಷದ ಜತೆ ಗುರುತಿಸಿಕೊಂಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ್ದಾರೆ. ನಾನು ಮೊದಲಿನಿಂದಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತ ಬಂದಿದ್ದೇನೆ. ಪರಿಷತ್ತಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಸಮ್ಮೇಳನದ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಿಕೊಳ್ಳುವುದರ ಬಗ್ಗೆ ಕೇಳಿದ್ದೇನೆ. ಅದನ್ನು ಹೋಗಲಾಡಿಸಿ ಅಲ್ಲಿ ಪಾರದರ್ಶಕತೆ ತರುವುದು ನನ್ನ ಉದ್ದೇಶವಾಗಿದೆ. ಅದಕ್ಕಾಗಿಯೇ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಪರಿಷತ್ತಿನ 105 ವರ್ಷಗಳ ಇತಿಹಾಸದಲ್ಲಿ ಬಳ್ಳಾರಿಯಿಂದ ಮೊದಲ ಬಾರಿಗೆ ನಾನು ಸ್ಪರ್ಧಿಸುತ್ತಿದ್ದೇನೆ. ಈ ಹಿಂದೆ ರೆವರೆಂಡ್‌ ಚೆನ್ನಪ್ಪ ಅಧ್ಯಕ್ಷರಾಗಿ ನೇರವಾಗಿ ನೇಮಕಗೊಂಡಿದ್ದರು. ಅದಾದ ಬಳಿಕ ಯಾರೂ ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ. ಪರಿಷತ್ತಿನಲ್ಲಿ ಸುಮಾರು 75ರಿಂದ 80 ವರ್ಷ ಬೆಂಗಳೂರು ಮೂಲದವರು, ಒಂದೇ ಸಮುದಾಯದವರು ಸತತವಾಗಿ ಅಧ್ಯಕ್ಷರಾಗಿದ್ದಾರೆ. ಕಲ್ಯಾಣ ಕರ್ನಾಟಕದವರು ಅಧ್ಯಕ್ಷರಾಗಬಾರದೇ’ ಎಂದು ಕೇಳಿದರು.

‘ರಾಜ್ಯದ 21 ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದೇನೆ. ಆರು ಕೋಟಿ ಜನಸಂಖ್ಯೆ ಹೊಂದಿರುವ ಪರಿಷತ್ತಿನಲ್ಲಿ 4 ಲಕ್ಷ ಸದಸ್ಯರಿದ್ದಾರೆ. ಇದು ಬದಲಾಗಬೇಕು. ಕನ್ನಡ ಮಾತನಾಡುವ ಪ್ರತಿಯೊಬ್ಬರೂ ಪರಿಷತ್ತಿನ ಅಧ್ಯಕ್ಷರಾಗಬೇಕು. ನಾನು ಗೆದ್ದರೆ ಮೊಬೈಲ್‌ನಿಂದ ಮಿಸ್ಡ್‌ ಕಾಲ್‌ ಕೊಟ್ಟು ಸದಸ್ಯರಾಗುವ ವ್ಯವಸ್ಥೆ ಜಾರಿಗೆ ತರುವೆ. ಪರಿಷತ್ತಿನ ಯಾವ ಸೌಕರ್ಯವೂ ಪಡೆಯುವುದಿಲ್ಲ. ಸಮ್ಮೇಳನದ ಸಂಪೂರ್ಣ ಹಣ ಜಿಲ್ಲಾಧಿಕಾರಿ ಖಾತೆಗೆ ಹಾಕಿಸಿ, ಅವರಿಂದ ಖರ್ಚು ಮಾಡಿಸುವೆ. ಮಹಿಳೆಯರ ಪ್ರಾತಿನಿಧ್ಯಕ್ಕೆ ಹೆಚ್ಚಿನ ಒತ್ತು ಕೊಡುವೆ’ ಎಂದು ಹೇಳಿದರು.

ಪರಿಷತ್ತಿನ ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ಯತ್ನಳ್ಳಿ ಮಲ್ಲಯ್ಯ ಮಾತನಾಡಿ, ‘ರಾಜಶೇಖರ ಅವರು ಇನ್ನೂ ಯುವಕರು. ಮೇಲಿಂದ ನಮ್ಮ ಜಿಲ್ಲೆಯವರು. ಹೋರಾಟದ ಹಿನ್ನೆಲೆಯಿಂದ ಬಂದವರು. ಹೀಗಾಗಿಯೇ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ’ ಎಂದರು.

ಎಚ್‌.ಎಂ. ಸೋಮನಾಥ, ಮಧುರಚೆನ್ನ ಶಾಸ್ತ್ರಿ, ವಿಶ್ವನಾಥ, ಹನುಮೇಶ ಉಪ್ಪಾರ, ದುರ್ಗೇಶ, ಶ್ರೀಧರ್‌, ಪ್ರಭಾಕರ್‌, ಗುರುಪ್ರಸಾದ್‌ ಇದ್ದರು.

‘ಕನ್ನಡ ಭವನಕ್ಕೆ ₹1 ಲಕ್ಷ’
‘ನಾನು ಮೂಲತಃ ಹರಪನಹಳ್ಳಿಯವನು. ನೂತನ ಜಿಲ್ಲೆ ವಿಜಯನಗರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹1 ಲಕ್ಷ ಕೊಡುವೆ. ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರು ಒಂದು ಎಕರೆ ಜಾಗ ಒದಗಿಸಿಕೊಡಬೇಕು. ಒಂದುವೇಳೆ ನಾನು ಗೆದ್ದರೆ ವಿಜಯನಗರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸುತ್ತೇನೆ’ ಎಂದು ರಾಜಶೇಖರ ಮುಲಾಲಿ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.