ADVERTISEMENT

ಮಹೇಶ್‌ ಜೋಶಿ ಬೆಂಬಲಕ್ಕೆ ಆರ್‌ಎಸ್‌ಎಸ್‌ ನಿಂತಿದ್ದು ದುರಂತ: ರಾಜಶೇಖರ ಮುಲಾಲಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 6:37 IST
Last Updated 6 ನವೆಂಬರ್ 2021, 6:37 IST
   

ಹೊಸಪೇಟೆ (ವಿಜಯನಗರ): ‘ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ಮಹೇಶ್‌ ಜೋಶಿ ಅವರ ಬೆಂಬಲಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್ಎಸ್‌) ನಿಂತಿರುವುದು ದುರಂತ’ ಎಂದು ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ, ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ತಿಳಿಸಿದರು.

‘ಸಾಹಿತ್ಯ, ಕಲೆ, ಆಟಕ್ಕೆ ಯಾವುದೇ ಜಾತಿಯಿಲ್ಲ. ಆದರೆ, ಆರ್‌ಎಸ್‌ಎಸ್‌ನವರು ಬಹಿರಂಗವಾಗಿ ಮಹೇಶ್‌ ಜೋಶಿ ಪರ ಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ಸಂಘ ಪರಿಷತ್ತಿನ ತಂಟೆಗೆ ಬರಬಾರದಿತ್ತು. ಪರಿಷತ್ತಿನ ಪ್ರಬುದ್ಧ ಮತದಾರರು ಸಂಘಕ್ಕೆ ತಕ್ಕ ಉತ್ತರ ಕೊಡುತ್ತಾರೆ’ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಪರಿಷತ್ತಿನ 107 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಹಳೆ ಮೈಸೂರು ಭಾಗದವರೇ ಹೆಚ್ಚಿನವರು ಅಧ್ಯಕ್ಷರಾಗುತ್ತ ಬಂದಿದ್ದಾರೆ. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಪರಿಷತ್ತು ನಾಡು, ನುಡಿ, ಜಲ ಸಂರಕ್ಷಣೆಗೆ ಇರುವಂಥದ್ದು. ಇದರಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯ. ಅನೇಕ ವರ್ಷಗಳಿಂದ ಭ್ರಷ್ಟಾಚಾರ ವಿರೋಧಿ ಹೋರಾಟ ನಡೆಸುತ್ತಿರುವ ನಾನು ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿರುವೆ. ಕಲ್ಯಾಣ ಕರ್ನಾಟಕದ ಮೂರ್ನಾಲ್ಕು ಜನ ಚುನಾವಣೆಗೆ ನಿಂತಿದ್ದಾರೆ. ನನಗೆ ಬೆಂಬಲ ಸಿಗುವ ಭರವಸೆ ಇದೆ’ ಎಂದು ತಿಳಿಸಿದರು.

ADVERTISEMENT

‘ನಾನು ಅಧ್ಯಕ್ಷನಾಗಿ ಚುನಾಯಿತನಾದರೆ ಪರಿಷತ್ತಿನಿಂದ ನೀಡುವ ವೇತನ, ವಾಹನ ಸೇರಿದಂತೆ ಯಾವುದೇ ಸೌಕರ್ಯ ಪಡೆಯುವುದಿಲ್ಲ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಭವನ ಸ್ಥಾಪನೆಗೆ ಒತ್ತು ಕೊಡುವೆ. ವಿಶಾಲ ಕರ್ನಾಟಕದ ಆಶಯ ಹೊಂದಿರುವ ಪರಿಷತ್ತಿನ ಸದಸ್ಯರ ಸಂಖ್ಯೆ ಹೆಚ್ಚಿಸಲು ಶ್ರಮಿಸುವೆ. ಮೊಬೈಲ್‌ನಿಂದ ಮಿಸ್ಡ್‌ ಕಾಲ್‌ ಕೊಟ್ಟು ಪರಿಷತ್ತಿನ ಸದಸ್ಯರಾಗುವ ವ್ಯವಸ್ಥೆ ಜಾರಿಗೆ ತರುವೆ. ತಾಲ್ಲೂಕು ಸೇರಿದಂತೆ ಗ್ರಾಮೀಣ ಭಾಗದ ಬರಹಗಾರರಿಗೆ ವೇದಿಕೆ ಸಿಕ್ಕಿಲ್ಲ. ಅದನ್ನು ದೊರಕಿಸಿಕೊಡಲು ಶ್ರಮಿಸುವೆ’ ಎಂದು ಹೇಳಿದರು.

‘ಶತಮಾನದ ಇತಿಹಾಸ ಹೊಂದಿರುವ ಪರಿಷತ್ತಿನಲ್ಲಿ ಪ್ರತ್ಯೇಕ ಮಹಿಳಾ, ರೈತ ಘಟಕ ಇಲ್ಲ. ನಾನು ಗೆದ್ದರೆ ಆ ಎರಡೂ ಘಟಕ ಆರಂಭಿಸಲು ಮೊದಲ ಆದ್ಯತೆ ಕೊಡುವೆ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಮೀಸಲು ಹೆಚ್ಚಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುವೆ’ ಎಂದು ತಿಳಿಸಿದರು.

‘ರಾಜಶೇಖರ ಮುಲಾಲಿ ಅವರು ಸಾಮಾಜಿಕ ಕಾರ್ಯಗಳಿಂದ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಗೆದ್ದರೆ ಕಲ್ಯಾಣ ಕರ್ನಾಟಕಕ್ಕೆ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ. ಮತದಾರರು ಅವರನ್ನು ಬೆಂಬಲಿಸುವ ಭರವಸೆ’ ಎಂದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಂ.ಎಂ. ಶಿವಪ್ರಕಾಶ ಹೇಳಿದರು.

‘ರಾಜಶೇಖರ ಮುಲಾಲಿ ಸಾಮಾಜಿಕ ಕಾಳಜಿಯ ವ್ಯಕ್ತಿ. ಅವರು ಯುವಕರು. ಇಂಥವರು ಗೆದ್ದರೆ ಪರಿಷತ್ತಿನಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾರೆ. ಸರ್ಕಾರಿ ಕೆಲಸದಿಂದ ನಿವೃತ್ತರಾದವರು ಹಿಂಬಾಗಿಲಿನ ಮೂಲಕ ಪರಿಷತ್ತಿಗೆ ಪ್ರವೇಶ ಪಡೆಯುತ್ತಿದ್ದಾರೆ. ಅದನ್ನು ತಡೆಯುವ ಕೆಲಸ ಮತದಾರರು ಮಾಡಬೇಕು’ ಎಂದು ಮುಖಂಡ ಮಧುರ ಚೆನ್ನ ಶಾಸ್ತ್ರಿ ಮನವಿ ಮಾಡಿದರು.

ಪ್ರೌಢದೇವರಾಯ ಎಂಜಿನಿಯರಿಂಗ್‌ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ, ಮುಖಂಡರಾದ ಶರಣ ಸ್ವಾಮಿ, ಎಚ್‌.ಎಂ. ಸೋಮನಾಥ, ಬಸವರಾಜ ಅಕ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.