ADVERTISEMENT

ಪ್ರತ್ಯೇಕತೆ ತೋರಿಸದೇ ಬಿಜೆಪಿ ಕಟ್ಟೀರಿ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮುಖಂಡರಿಗೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 3 ಮೇ 2022, 10:40 IST
Last Updated 3 ಮೇ 2022, 10:40 IST
ಹೊಸಪೇಟೆಯಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿದರು
ಹೊಸಪೇಟೆಯಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ವಿಜಯನಗರದಲ್ಲಿ ತನು, ಮನ, ಧನದಿಂದ ದುಡಿಯುವ ಬಿಜೆಪಿ ಕಾರ್ಯಕರ್ತರು ಇದ್ದಾರೆ. ಪ್ರತ್ಯೇಕತೆಯನ್ನು ತೋರಿಸದೇ ಪಕ್ಷ ಕಟ್ಟೀರಿ. ಆಗ ಕಾರ್ಯಕರ್ತರು ನಿಮ್ಮನ್ನು ಆಲಿಂಗನ ಮಾಡುವರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು.

ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಅವಲೋಕನ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ವಿಚಾರಧಾರೆಗಳನ್ನು ಒಪ್ಪಿಕೊಂಡು ನಗರಸಭೆಯ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್‌ ಮುಕ್ತ ವಿಜಯನಗರ ಆಗಲಿದೆ ಎನ್ನುವುದರ ಸಂಕೇತವಿದು ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿಯಿಂದ ಮುಂದಿನ ಗುರಿ ನಿಗದಿಯಾಗಿದೆ. ವ್ಯವಸ್ಥಿತ, ಯೋಜನಾಬದ್ಧ, ಅಚ್ಚುಕಟ್ಟು ನಿರ್ವಹಣೆಗೆ ಕಾರ್ಯಕಾರಿಣಿ ಪ್ರೇರಣಾದಾಯಕವಾಗಿದೆ. ವಿಜಯನಗರ ವಿಜಯದ ಸಂಕೇತವೂ ಹೌದು. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

ADVERTISEMENT

ರಾಜ್ಯದಲ್ಲಿ ಇದುವರೆಗೆ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಗಳಲ್ಲಿ ವಿಜಯನಗರದಲ್ಲಿ ನಡೆದ ಕಾರ್ಯಕ್ರಮ ಅತ್ಯುತ್ತಮವಾಗಿತ್ತು. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಹಾಗೂ ಕಾರ್ಯಕರ್ತರ ಶ್ರಮದಿಂದ ಇದು ಸಾಧ್ಯವಾಗಿದೆ. ಕಾರ್ಯಕರ್ತರ ಬೆಳವಣಿಗೆ, ವ್ಯಕ್ತಿ ನಿರ್ಮಾಣಕ್ಕೆ ಇದು ಸ್ಫೂರ್ತಿಯಾಗಿದೆ ಎಂದು ಕೊಂಡಾಡಿದರು.

ಸಚಿವ ಆನಂದ್‌ ಸಿಂಗ್‌ ಮಾತನಾಡಿ, ‘ಪಕ್ಷದ ಕಾರ್ಯಕರ್ತರಲ್ಲಿ ನಾಯಕತ್ವ ಗುಣ ಬೆಳೆಸುವುದು ಮತ್ತು ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಬಿಜೆಪಿ ಕಾರ್ಯಕಾರಿಣಿ ಯಶಸ್ವಿಯಾಗಿದೆ’ಎಂದರು.

ಶಾಸಕರಾದ ಶಶೀಲ್ ಜಿ. ನಮೋಶಿ, ವೈ.ಎಂ. ಸತೀಶ ರೆಡ್ಡಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಟೆಂಗಿನಕಾಯಿ, ಅಶ್ವತ್ಥ ನಾರಾಯಣ, ವಿಜಯನಗರ ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಬಳ್ಳಾರಿ ಅಧ್ಯಕ್ಷ ಮುರಾರಿಗೌಡ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಹುಡಾ ಅಧ್ಯಕ್ಷ ಅಶೋಕ್‌ ಜೀರೆ, ಮುಖಂಡರಾದ ಸಿದ್ದೇಶ್‌ ಯಾದವ್‌, ಲೋಕೇಶ್‌, ಚಂದ್ರಶೇಖರ ಪಾಟೀಲ, ವಿರೂಪಾಕ್ಷಪ್ಪ, ನೇಮರಾಜ ನಾಯ್ಕ, ನಂಜನಗೌಡ, ಅಯ್ಯಾಳಿ ತಿಮ್ಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.