ಹೊಸಪೇಟೆ (ವಿಜಯನಗರ): ಕಾಂಗ್ರೆಸ್ ನಾಯಕಿ ರಾಣಿ ಸಂಯುಕ್ತಾ ಅವರು ಹಗರಿಬೊಮ್ಮನಹಳ್ಳಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಮುಂದಾಗಿರುವುದಕ್ಕೆ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ ಅಭಿನಂದನೆ ಸಲ್ಲಿಸಿದೆ.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದ ವತಿಯಿಂದ ಮಾರ್ಚ್ 12ರಂದು ಹಂಪಿಯಿಂದ ನಗರದವರೆಗೆ ಸಕ್ಕರೆ ಕಾರ್ಖಾನೆಗಾಗಿ ಕಾಲ್ನಡಿಗೆ ಜಾಥಾ ನಡೆಸಲಾಗಿತ್ತು. ಅದಕ್ಕೆ ಫಲ ದೊರೆತಂತಾಗಿದೆ ಎಂದರು.
‘ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೆಂಚನಬಂಡಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸಿದರೂ ಹೊಸಪೇಟೆ ನಗರದಲ್ಲಿ ಕಬ್ಬು ಸಂಗ್ರಹಣಾ ಕೇಂದ್ರ ತೆರೆದು ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ರಾಣಿ ಸಂಯುಕ್ತ ಅವರ ಪ್ರಯತ್ನಕ್ಕೆ ಸಂಘದ ಸಂಪೂರ್ಣ ಬೆಂಬಲ ಇದೆ. ಇತರ ಯಾರಾದರೂ ಹೊಸಪೇಟೆ ಸುತ್ತಮುತ್ತಲಲ್ಲೇ ಸಕ್ಕರೆ ಕಾರ್ಖಾನೆ ನಿರ್ಮಿಸಿದರೆ ಅವರಿಗೂ ಸಂಘದ ಬೆಂಬಲ ಇರುತ್ತದೆ’ ಎಂದು ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಎ.ಖಾದ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರಿಬಸವರಾಜ ಎಂ., ಮಹಿಳಾ ಘಟಕದ ಅಧ್ಯಕ್ಷೆ ಎಂ.ರತ್ನಮ್ಮ, ರಾಜ್ಯ ಉಪಾಧ್ಯಕ್ಷೆ ವಿ.ಉಷಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.