ಹೊಸಪೇಟೆ (ವಿಜಯನಗರ): ‘ಹೊಸಪೇಟೆ ಸಮೀಪ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಎರಡು ತಿಂಗಳೊಳಗೆ ಸ್ವತಃ ಮುಖ್ಯಮಂತ್ರಿ ಅವರಿಂದಲೇ ಭೂಮಿಪೂಜೆ ಮಾಡಿಸಲಾಗುವುದು. ಇದು ನನ್ನ ಕೊನೆಯ ಭರವಸೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ರೈತರಿಗೆ ಭರವಸೆ ನೀಡಿದ್ದಾರೆ.
ಶಾಸಕ ಎಚ್.ಆರ್.ಗವಿಯಪ್ಪ ಅವರ ಸಮ್ಮುಖದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವರು ಈ ಭರವಸೆ ನೀಡಿದ್ದಾರೆ. ಮೊದಲು ಸಕ್ಕರೆ ಕಾರ್ಖಾನೆ ನಿರ್ಮಿಸಲು ಅಡಿಗಲ್ಲು ಹಾಕಿ, ಬಳಿಕ ಮೇ 20ರ ಸಾಧನಾ ಸಮಾವೇಶ ಮಾಡಿ ಎಂದು ಒತ್ತಾಯಿಸಿದ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ವಿಜಯನಗರ ಜಿಲ್ಲಾ ರೈತ ಸಂಘಟನೆಗಳ ಹೋರಾಟ ಸಮಿತಿಯ ಬೇಡಿಕೆಗೆ ಸ್ಪಂದಿಸಿದ ಸಚಿವರು ಈ ಭರವಸೆ ನೀಡಿದ್ದಾರೆ.
ಆದರೆ ಎಚ್.ಆರ್.ಗವಿಯಪ್ಪ ಅವರಿಗೆ ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಸ್ಥಾಪಿಸಿದ್ದರ ಗೌರವ, ಹೆಸರು ಬರಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ನಗರದ ಪ್ರಭಾವಿ ವ್ಯಕ್ತಿಯೊಬ್ಬರಿಂದಲೂ ಶತಪ್ರಯತ್ನ ನಡೆದಿರುವುದು ಇದೀಗ ಗುಟ್ಟಾಗಿ ಉಳಿದಿಲ್ಲ.
ರಾಣಿ ಸಂಯುಕ್ತಾ ಅವರು ಗಾದಿಗನೂರು ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಶಾಸಕ ಭರತ್ ರೆಡ್ಡಿ ಪ್ರಯತ್ನ ಆರಂಭಿಸಿದ್ದರೆ, ಮರಿಯಮ್ಮನಹಳ್ಳಿ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಪ್ರಯತ್ನ ನಡೆಸಿದ್ದಾರೆ. ಮತ್ತೊಂದೆಡೆ ಗವಿಯಪ್ಪ ಅವರು ಶಾಸಕರಾಗಿ ಇದ್ದಷ್ಟು ಅವಧಿಯಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣವಾಗದಂತೆ ನೋಡಿಕೊಳ್ಳಲೇಬೇಕು ಎಂದು ಪ್ರಭಾವಿ ನಾಯಕರೊಬ್ಬರು ಹಠಕ್ಕೆ ಬಿದ್ದಿದ್ದಾರೆ ಎಂಬ ವಿಚಾರವೂ ದೊಡ್ಡದಾಗಿ ಕೇಳಿಸತೊಡಗಿದೆ.
ರೈತರ ಬೆಂಬಲ ಯಾಚನೆ: ಕೆಡಿಪಿ ಸಭೆ, ಮೇ 20ರ ಸಭೆಯ ತಯಾರಿಗೆಂದು ನಗರಕ್ಕೆ ಬಂದಿದ್ದ ಜಮೀರ್ ಅಹಮದ್ ಖಾನ್ ಉಳಿದುಕೊಂಡಿದ್ದುದು ವೈಕುಂಠ ಅತಿಥಿಗೃಹದಲ್ಲಿ. ಅಲ್ಲಿಗೆ ಕೆಲವು ರೈತ ಮುಖಂಡರನ್ನು ಕರೆಸಿಕೊಂಡಿದ್ದ ‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ ಅವರು ಸಚಿವರನ್ನು ಭೇಟಿ ಮಾಡಿಸಲು ಪ್ರಯತ್ನಿಸಿದ್ದರು. ಆದರೆ ಅಲ್ಲಿದ್ದ ಶಾಸಕರಾದ ಭರತ್ ರೆಡ್ಡಿ, ಜೆ.ಎನ್.ಗಣೇಶ್, ಭೀಮಾ ನಾಯ್ಕ್ ಅವರು ತಮ್ಮ ತಮ್ಮ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಕ್ಕೆ ಬೆಂಬಲ ಕೊಡಿ ಎಂದು ಅಂಗಲಾಚಿದರು ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಹೊಸಪೇಟೆ ಸುತ್ತಮುತ್ತ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಹಲವು ಅಡಚಣೆಗಳು ಇದ್ದು, ಹಂಪಿ ವಿಶ್ವಪರಂಪರೆ ತಾಣ, ಕರಡಿಧಾಮ, ಸಂರಕ್ಷಿತ ಕಾಡು, ಶಿಕ್ಷಣ ವಲಯ, ನಗರ ಪ್ರದೇಶ.. ಹೀಗೆ ಹಲವು ಅಡ್ಡಿಗಳ ನಡುವೆ ಸೂಕ್ತ ಜಾಗ ಹುಡುಕಿ ಕಾರ್ಖಾನೆ ಸ್ಥಾಪಿಸುವ ಸವಾಲು ಇದೆ. ಕಾಳಘಟ್ಟದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯ ಬಗ್ಗೆ ಹೇಳುತ್ತಿದ್ದರೂ ಅದಕ್ಕೆ ಅನುಮತಿ ಸಿಗದು ಎಂದು ಸ್ಥಳೀಯರು ಹೇಳುತ್ತಿದ್ದು, ಅಲ್ಲಿ ಸ್ಥಾಪಿಸಲು ಉದ್ದೇಶಿಸಿದ ವಸತಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ. ರಾಜಕೀಯ ಪಕ್ಷಗಳ ಮೇಲಾಟದಲ್ಲಿ ಅಂತಿಮವಾಗಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಎಲ್ಲಿ, ಯಾರಿಂದ, ಯಾವಾಗ ಎಂಬ ಕುತೂಹಲ ಮಾತ್ರ ಉಳಿದಿದೆ.
ಸಕ್ಕರೆ ಕಾರ್ಖಾನೆ ಸಿಎಂ ಕನಸೂ ಹೌದು. ರೈತ ಮುಖಂಡರ ಸಮ್ಮುಖದಲ್ಲೇ ಶಾಸಕ ಗವಿಯಪ್ಪ ಜತೆಗೂಡಿ 2 ತಿಂಗಳೊಳಗೆ ಕಾರ್ಖಾನೆಗೆ ಗುದ್ದಲಿ ಪೂಜೆ ಮಾಡಿಸುತ್ತೇನೆಜಮೀರ್ ಅಹಮದ್ ಖಾನ್ ಜಿಲ್ಲಾ ಉಸ್ತುವಾರಿ ಸಚಿವ
ಏಳು ಕಡೆ ಜಾಗ ಪರಿಶೀಲನೆ
ಸಕ್ಕರೆ ಕಾರ್ಖಾನೆ ಕಾಳಘಟ್ಟದಲ್ಲಿ ನಿರ್ಮಾಣವಾಗುವುದಕ್ಕೆ ಸದ್ಯ ಎದುರಾಗಿರುವುದು ಮೊರಾರ್ಜಿ ವಸತಿ ಶಾಲೆಯ ಅಡ್ಡಿ. ಆದರೆ ಅಡಿಗಲ್ಲು ಹಾಕುವ ಹಂತದಲ್ಲಿ ಹಂಪಿ ಪ್ರಾಧಿಕಾರ ತುಂಗಭದ್ರಾ ನೆದಿಗೆ ಮಾಲಿನ್ಯ ನೀರು ಸೇರ್ಪಡೆ ವಿಚಾರಗಳೆಲ್ಲ ಗರಿಗೆದರಿ ಅಲ್ಲಿ ಕಾರ್ಖಾನೆ ಸ್ಥಾಪನೆಯಾಗದೆ ಇರುವ ಸಾಧ್ಯತೆಯೇ ಹೆಚ್ಚಿದೆ. ಹೀಗಾಗಿ ಬದಲಿ ಏಳು ಕಡೆ ಜಾಗ ಗುರುತಿಸುವ ಪ್ರಯತ್ನವನ್ನು ಶಾಸಕರು ಮಾಡಿದ್ದಾರೆ ತಹಶೀಲ್ದಾರ್ ಅವರಿಂದ ವರದಿ ತರಿಸಿಕೊಂಡಿದ್ದಾರೆ ಎಂದು ಶಾಸಕರ ಆಪ್ತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.