ಹೊಸಪೇಟೆ (ವಿಜಯನಗರ): ಹೊಸಪೇಟೆ ಬಳಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದು ಸರ್ಕಾರ. ಮುಖ್ಯಮಂತ್ರಿ ಅವರು ತಿಂಗಳೊಳಗೆ ಜಿಲ್ಲೆಗೆ ಬರಲಿದ್ದು, ಯಾವಾಗ ಸ್ಥಾಪನೆ, ಭೂವಿವಾದ ಪರಿಹಾರ ಮೊದಲಾದ ವಿಚಾರಗಳನ್ನು ಅವರೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಇಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಭೂಮಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲಾಗುವುದು ಎಂದರು.
‘ಜಾತಿ ಗಣತಿಗೆ ನನ್ನ ಸಂಪೂರ್ಣ ಬೆಂಬಲ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿ ಅವರು ಜಾತಿಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಮಲ್ಲಿಕಾರ್ಜುನ ಖರ್ಗೆ ಬಿಟ್ಟರೆ ಪಕ್ಷದ ಎರಡನೇ ದೊಡ್ಡ ನಾಯಕರು. ಅವರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡೇ ಮುಖ್ಯಮಂತ್ರಿ ಅವರು ಜಾತಿ ಗಣತಿಯನ್ನು ರಾಜ್ಯದ ಮುಂದಿಟ್ಟಿದ್ದಾರೆ’ ಎಂದು ಗವಿಯಪ್ಪ ಹೇಳಿದರು.
ಅಧಿಕಾರದಲ್ಲಿರಲಿಲ್ಲ: ‘ಜಾತಿ ಗಣತಿ ಮಾಡಿದವರು ನಿಮ್ಮ ಮನೆಗೆ ಬಂದು ಸಮೀಕ್ಷೆ ಮಾಡಿದ್ದಾರಾ?’ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ‘ನಾನು ಆಗ ಶಾಸಕನಾಗಿರಲಿಲ್ಲ, ಆದರೆ ಸಿದ್ದರಾಮಯ್ಯ ಅವರು ಮೊದಲ ಅವಧಿಗೆ ಸಿಎಂ ಆದ ತಕ್ಷಣ ಜಾತಿಗಣತಿಗೆ ಕ್ರಮ ಕೈಗೊಂಡರು, ಐದು ವರ್ಷದಲ್ಲಿ ವರದಿ ಸಿದ್ಧವಾಯಿತು. ಆಗ ನಮ್ಮ ಸರ್ಕಾರ ಇರಲಿಲ್ಲ, ಇದೀಗ ಮತ್ತೆ ನಮ್ಮ ಸರ್ಕಾರ ಇರುವ ಕಾರಣ ಆ ವರದಿ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಹಿಂದುಳಿದ ಸಮುದಾಯಗಳಿಗೆ ಖಂಡಿತ ನ್ಯಾಯ ಸಿಕ್ಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.