ADVERTISEMENT

ಗೇಟ್‌ ಅಳವಡಿಕೆಗೆ ಬೇಕು 3 ತಿಂಗಳು

ನವೆಂಬರ್‌ ನಂತರ ತುಂಗಭದ್ರಾ ಅಣೆಕಟ್ಟೆಯ ಎಲ್ಲ ಕ್ರಸ್ಟ್‌ಗೇಟ್‌ ಬದಲಾವಣೆ

ಎಂ.ಜಿ.ಬಾಲಕೃಷ್ಣ
Published 25 ಜೂನ್ 2025, 6:00 IST
Last Updated 25 ಜೂನ್ 2025, 6:00 IST
ತುಂಗಭದ್ರಾ ಅಣೆಕಟ್ಟೆ ಸಮೀಪಕ್ಕೆ ತರಲಾಗಿರುವ 19ನೇ ಕ್ರಸ್ಟ್‌ಗೇಟ್‌ನ ಬಿಡಿ ಭಾಗಗಳು
ತುಂಗಭದ್ರಾ ಅಣೆಕಟ್ಟೆ ಸಮೀಪಕ್ಕೆ ತರಲಾಗಿರುವ 19ನೇ ಕ್ರಸ್ಟ್‌ಗೇಟ್‌ನ ಬಿಡಿ ಭಾಗಗಳು   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಕ್ರಸ್ಟ್‌ಗೇಟ್‌ಗಳು ಮುಂದಿನ ವರ್ಷದ ಮಳೆಗಾಲಕ್ಕೆ ಮೊದಲು ಬದಲಾವಣೆ ಆಗಲಿದ್ದು, ಮೂರು ತಿಂಗಳಲ್ಲಿ ಈ ಕೆಲಸ ಕೊನೆಗೊಳ್ಳುವ ವಿಶ್ವಾಸವನ್ನು ತುಂಗಭದ್ರಾ ಮಂಡಳಿ ವ್ಯಕ್ತಪಡಿಸಿದೆ.

‘ಸುಮಾರು 70 ವರ್ಷ ಹಳೆಯದಾಗಿರುವ ಕ್ರಸ್ಟ್‌ಗೇಟ್‌ ತೆರವುಗೊಳಿಸಲು ಒಂದು ತಂಡ ಇದ್ದರೆ, ಹೊಸ ಕ್ರಸ್ಟ್‌ಗೇಟ್ ಅಳವಡಿಸಲು ಇನ್ನೊಂದು ತಂಡ ಇರುತ್ತದೆ. ಹೀಗೆ ಒಂದು ಗೇಟ್‌ ಅಳವಡಿಸಲು ಕನಿಷ್ಠ ಮೂರು ದಿನ ಬೇಕಾಗಲಿದೆ. ತಿಂಗಳಿಗೆ ಗರಿಷ್ಠ 10 ಗೇಟ್‌ಗಳನ್ನಷ್ಟೇ ಕೂರಿಸಲು ಸಾಧ್ಯವಾಗಬಹುದು’ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಕೊಚ್ಚಿ ಹೋಗಿದ್ದ 19ನೇ ಕ್ರಸ್ಟ್‌ಗೇಟ್‌ ಸ್ಥಳದಲ್ಲಿ ಸ್ಟಾಪ್‌ಲಾಗ್ ಗೇಟ್ ಇದೆ. ಹೀಗಾಗಿ ಈ ಮಳೆಗಾಲ ಅಣೆಕಟ್ಟೆಯಿಂದ ನೀರು ಹೊರಬಿಡುವಾಗ ಆ ಒಂದು ಗೇಟ್ ಬದಲಿಗೆ ಇತರ 32 ಗೇಟ್‌ಗಳಿಂದ ನೀರು ಹೊರಬಿಡಲಾಗುವುದು. ನವೆಂಬರ್‌ನಲ್ಲಿ ಬೆಡ್‌ಕಾಂಕ್ರೀಟ್ ಹಂತಕ್ಕೆ ಜಲಾಶಯದ ನೀರು ಇಳಿದಾಗ ಮೊದಲಿಗೆ ಸ್ಟಾಪ್‌ಲಾಗ್ ಗೇಟ್‌ ತೆಗೆದು ಅಲ್ಲಿ ಈಗಾಗಲೇ ಸಿದ್ಧವಾಗಿ ಬಂದಿರುವ ಕ್ರಸ್ಟ್‌ಗೇಟ್‌ ಅಳವಡಿಸಲಾಗುವುದು’ ಎಂದು ಅವರು ವಿವರಿಸಿದರು.

ADVERTISEMENT

‘19ನೇ ಗೇಟ್‌ ಸಿದ್ಧಪಡಿಸಿದಂತೆಯೇ ಇತರ ಎಲ್ಲಾ ಗೇಟ್‌ಗಳನ್ನೂ ಗದಗ ಬಳಿಯಲ್ಲೇ ಸಿದ್ಧಪಡಿಸಲಾಗುವುದು. ತಿಂಗಳಿಗೆ ಮೂರರಿಂದ ನಾಲ್ಕು ಗೇಟ್‌ಗಳ ನಿರ್ಮಾಣ ಸಾಧ್ಯವಾಗಲಿದೆ. ಜುಲೈ ತಿಂಗಳಿಂದಲೇ ರಚನೆ ಕಾರ್ಯ ಆರಂಭವಾಗಲಿದೆ. ಹೀಗಾಗಿ ಫೆಬ್ರುವರಿ ವೇಳೆಗೆ ಎಲ್ಲಾ ಗೇಟ್‌ಗಳು ಸಜ್ಜಾಗಿ ಅಳವಡಿಕೆ ಕೆಲಸ ಸುಗಮವಾಗಿ ಸಾಗಲಿದೆ. ಫೆಬ್ರುವರಿಯಲ್ಲಿ ಕೆಲಸ ಆರಂಭವಾದರೂ ಮೇ ಒಳಗೆ ಪೂರ್ಣಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

ನವೆಂಬರ್‌ನಲ್ಲೇ ಏಕೆ?

ಕ್ರಸ್ಟ್‌ಗೇಟ್‌ ಅಳವಡಿಸಬೇಕಿದ್ದರೆ ತುಂಬಿದ ಜಲಾಶಯದ ನೀರು 40 ಟಿಎಂಸಿ ಅಡಿಯವರೆಗೆ ಖಾಲಿಯಾಗಲು ಕಾಯಬೇಕಾಗುತ್ತದೆ. ಕಳೆದ ಬಾರಿ ಫೆಬ್ರುವರಿ 17ರ ವೇಳೆಗೆ 40 ಟಿಎಂಸಿ ಅಡಿಗೆ ಜಲಾಶಯದ ಮಟ್ಟ ಕುಸಿದಿತ್ತು. ಆದರೆ ಈ ಬಾರಿ ಜಲಾಶಯದಲ್ಲಿ ಗರಿಷ್ಠ 105.78 ಟಿಎಂಸಿ ಅಡಿ ಬದಲಿಗೆ ಕೇವಲ 80 ಟಿಎಂಸಿ ಅಡಿ ನೀರನ್ನಷ್ಟೇ ಸಂಗ್ರಹಿಸಿ ಇಡುವ ಕಾರಣ ಅಕ್ಟೋಬರ್ ಅಂತ್ಯದ ವೇಳೆಗೆ ನೀರಿನ ಮಟ್ಟ ಕ್ರಸ್ಟ್‌ಗೇಟ್ ಬೆಡ್‌ ಕಾಂಕ್ರೀಟ್ ಮಟ್ಟಕ್ಕೆ ಕುಸಿಯಬಹುದು ಎಂಬ ಲೆಕ್ಕಾಚಾರದಲ್ಲಿ ಈ ಅಂದಾಜು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.