ADVERTISEMENT

ಹೊಸಪೇಟೆ: ಮನೆ ಕಳ್ಳತನ; ಅಪರಾಧಿಗೆ 3 ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 14:40 IST
Last Updated 21 ಏಪ್ರಿಲ್ 2021, 14:40 IST

ಹೊಸಪೇಟೆ (ವಿಜಯನಗರ): ಮನೆಯ ಬೀಗ ಮುರಿದು ಕಳ್ಳತನ ಮಾಡಿರುವ ವ್ಯಕ್ತಿಗೆ ಇಲ್ಲಿನ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ತೃಪ್ತಿ ಧರಣಿ ಅವರು ಮೂರು ವರ್ಷ ಸಾದಾ ಜೈಲು ಶಿಕ್ಷೆ, ₹3,000 ದಂಡ ವಿಧಿಸಿ ಮಂಗಳವಾರ ಆದೇಶ ನೀಡಿದ್ದಾರೆ. ದಂಡ ಕಟ್ಟದಿದ್ದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳು ಸಾದಾ ಶಿಕ್ಷೆ ವಿಧಿಸಬೇಕು ಎಂದು ತಿಳಿಸಿದ್ದಾರೆ.

ಚಿತ್ರಕೇರಿ ನಿವಾಸಿ ಪೆನ್ನಪ್ಪ ಅಲಿಯಾಸ್‌ ಮೊಟ್ಟೆ ಪೆನ್ನಪ್ಪ ಅಲಿಯಾಸ್‌ ದೊಡ್ಡ ಪೆನ್ನ ಶಿಕ್ಷೆಗೆ ಒಳಗಾದ ವ್ಯಕ್ತಿ. ಪೆನ್ನಪ್ಪ, 2020, ಜನವರಿ 27ರ ಬೆಳಗಿನ ಜಾವ ಗಾಂಧಿ ಕಾಲೊನಿಯ ಪಾರ್ವತಿ ಜಿ. ಚೌಡಪ್ಪ ಅವರ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದರು. ಗಾದ್ರೇಜ್‌ನಿಂದ ₹70,000 ನಗದು, ₹24,000 ಮೌಲ್ಯದ ಆರು ಗ್ರಾಂ ಚಿನ್ನದ ಉಂಗುರ, ₹50,000 ಮೌಲ್ಯದ ಬೆಳ್ಳಿಯ ತಲಾ ಒಂದು ಗಣೇಶ, ಸರಸ್ವತಿ ಹಾಗೂ ಲಕ್ಷ್ಮಿ ಮೂರ್ತಿ, 4 ಬೆಳ್ಳಿ ಗ್ಲಾಸ್‌, 8 ಬೆಳ್ಳಿ ದೀಪ, 2 ಕುಂಕುಮ ಭರಣಿ ಕದ್ದೊಯ್ದಿದ್ದರು.

ಮನೆಯವರು ನೀಡಿದ ದೂರಿನ ಮೇರೆಗೆ ಸಿಪಿಐಗಳಾದ ವಿ. ನಾರಾಯಣ ಹಾಗೂ ಪ್ರಸಾದ್‌ ಕೆ. ಗೋಖಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಾದ, ಪ್ರತಿವಾದ ಆಲಿಸಿ, ಕಳ್ಳತನ ಮಾಡಿರುವುದು ರುಜುವಾತು ಆಗಿರುವುದರಿಂದ ಮೇಲಿನಂತೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾ ಎಸ್‌. ಮಿರಜಕರ ವಾದ ಮಂಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.