ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ತಲ್ಲೀನವಾಗಿದೆ, ಹೀಗಾಗಿ ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್‌ಗೇಟ್ ನಿರ್ಮಾಣದ ಪ್ರಸ್ತಾವಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. 2ನೇ ಬೆಳೆಗೆ ನೀರು ಕೊಡದ ಸರ್ಕಾರ ತಕ್ಷಣ ಗೇಟ್ ಅಳವಡಿಕೆ ಆರಂಭಿಸಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದರು.
ಇಲ್ಲಿನ ಟಿ.ಬಿ.ಡ್ಯಾಂ ಸಮೀಪ ನಿರ್ಮಾಣವಾಗುತ್ತಿರುವ ಕ್ರೆಸ್ಟ್‌ಗೇಟ್‌ಗಳನ್ನು ಬುಧವಾರ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘33 ಕ್ರೆಸ್ಟ್‌ಗೇಟ್‌ಗಳನ್ನು ನಿರ್ಮಾಣ ಮಾಡಲು ನಾನಾ ಕಂಪನಿಗಳಿಗೆ ಹೊಣೆ ನೀಡಲಾಗಿದೆ. ಸದ್ಯ 16 ಗೇಟ್‌ಗಳಷ್ಟೇ ಸಿದ್ಧವಾಗಿವೆ. ಈಗಿನ ನಿಧಾನಗತಿಯನ್ನು ನೋಡಿದರೆ ಮುಂದಿನ ಮಳೆಗಾಲಕ್ಕೆ ಮೊದಲು ಗೇಟ್ ಅಳವಡಿಕೆ ಆಗುತ್ತದೆ ಎಂದು ಅನಿಸುವುದಿಲ್ಲ ಎಂದರು.
‘ಗೇಟ್ ನಿರ್ಮಾಣಕ್ಕೆ ಸರ್ಕಾರದ ಬಳಿ ಹಣವಿಲ್ಲ. ಕಳುಹಿಸಿದ ಪ್ರಸ್ತಾವಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಡಿಕೆಶಿ ಮೇಲಿನ ಸಿಟ್ಟಿನಿಂದಾಗಿ ಸಿಎಂ ಅವರು ಜಲಸಂಪನ್ಮೂಲ ಇಲಾಖೆಗೆ ಹಣವನ್ನೂ ಬಿಡುಗಡೆ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಅಣೆಕಟ್ಟೆಗೆ ಬಂದು ಗೇಟ್ ಅಳವಡಿಕೆಗೆ ಚಾಲನೆ ನೀಡಬೇಕು’ ಎಂದು ಅಶೋಕ ಆಗ್ರಹಿಸಿದರು.
ಇದಕ್ಕೆ ಮೊದಲು ಪಕ್ಷದ ಕಾರ್ಯಕರ್ತರ ಸಭೆಯ ಹಿನ್ನೆಲೆಯಲ್ಲಿ ಮಾತನಾಡಿ, ಎರಡನೇ ಬೆಳೆಗೆ ನೀರು ಹರಿಸದ ಸರ್ಕಾರ ರೈತರಿಗೆ ಎಕರೆಗೆ ₹25 ಸಾವಿರ ಪರಿಹಾರ ನೀಡಲೇಬೇಕು ಎಂದು ಒತ್ತಾಯಿಸಿದರು.
ಹೆಸರಿಗಷ್ಟೇ ಸಿಎಂ: ರಾಜ್ಯದಲ್ಲಿ ಸದ್ಯ ಹೆಸರಿಗಷ್ಟೇ ಸಿಎಂ ಸಿದ್ದರಾಮಯ್ಯ ಇದ್ದಾರೆ, ಅವರಿಂದ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸರ್ಕಾರದ ವಿರುದ್ಧ ಬಿಜೆಪಿ ಪ್ರಬಲ ಹೋರಾಟ ಮಾಡಿದ್ದರಿಂದಲೇ ಕಳಂಕ ಹೊತ್ತ ಒಬ್ಬ ಸಚಿವ ರಾಜೀನಾಮೆ ನೀಡಬೇಕಾಯಿತು, ಮುಡಾದ 14 ನಿವೇಶನಗಳನ್ನು ವಾಪಸ್ ನೀಡಲಾಯಿತು. ಪಕ್ಷದ ಹೋರಾಟ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು.
ಬಿಜೆಪಿ ಅಭ್ಯರ್ಥಿ ಆಯ್ಕೆ: ಬಿಜೆಪಿಯು ಈಶಾನ್ಯ ಶಿಕ್ಷಕರ ಕ್ಷೇತ್ರವನ್ನು ಹಲವು ವರ್ಷಗಳಿಂದ ಗೆಲ್ಲುತ್ತ ಬಂದಿದೆ. ಅದನ್ನು ಮತ್ತೆ ಉಳಿಸಿಕೊಳ್ಳುವ ಸಲುವಾಗಿ ನಾವೆಲ್ಲ ಇಲ್ಲಿಗೆ ಬಂದಿದ್ದೇವೆ. ಯಾರು ಸೂಕ್ತ ಅಭ್ಯರ್ಥಿ ಎಂಬುದನ್ನು ತಿಳಿದುಕೊಂಡು ವರದಿ ಮಾಡಲಿದ್ದೇವೆ ಎಂದು ಅವರು ಹೇಳಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಸಭೆ ಬಿಜೆಪಿ ಮುಖ್ಯ ಸಚೇತಕ ದೊಡ್ಡಣಗೌಡ ಪಾಟೀಲ್, ವಿಧಾನ ಪರಿಷತ್‌ನಲ್ಲಿ ಪಕ್ಷದ ಸಚೇತಕ ಎನ್.ರವಿಕುಮಾರ್, ಶಾಸಕ ಕೃಷ್ಣ ನಾಯ್ಕ, ಮುಖಂಡರಾದ ಸಶಿಲ್ ನಮೋಶಿ, ಸೋಮಶೇಖರ ರೆಡ್ಡಿ, ಪ್ರತಾಪ್ ಗೌಡ ಪಾಟೀಲ್, ಸಂಜೀವ ರೆಡ್ಡಿ, ಚನ್ನಬಸವನಗೌಡ ಪಾಟೀಲ್,ಎನ್.ಶಂಕರಪ್ಪ, ಬಲ್ಲಾಹುಣ್ಸಿ ರಾಮಣ್ಣ ಇತರರು ಇದ್ದರು.
––––
ಸಂವಿಧಾನ–ಕಾಂಗ್ರೆಸ್‌ಗೆ ನೈತಿಕತೆ ಇಲ್ಲ
‘ಸಂವಿಧಾನವನ್ನು ಜೇಬಲ್ಲಿ ಇಟ್ಟುಕೊಂಡು ಅಡ್ಡಾವುದು ಕಾಂಗ್ರೆಸ್‌ನವರ ಇತ್ತೀಚಿನ ಹವ್ಯಾಸ ಆಗಿದೆ. ನೆಹರೂ ಅವರು ಸಂವಿಧಾನ ರಚನೆ ಮಾಡಲು ಬ್ರಿಟಿಷ್ ಅಧಿಕಾರಿಗೆ ನೀಡಿದ್ದರು. ಅಂದು ಗೊಂದಲ ಆಯಿತು, ಗಾಂಧೀಜಿ ಅವರು ಮದ್ಯಪ್ರವೇಶ ಮಾಡಿ ಅಂಬೇಡ್ಕರ್ ಅವರಿಗೆ ಬೆಂಬಲಿಸಿದರು. ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ಅವರು ಲೋಕಸಭೆಗೆ ಸ್ಪರ್ಧೆ ಮಾಡಿದಾಗ ನೆಹರೂ ಅವರು ಅಂಬೇಡ್ಕರ್ ವಿರುದ್ಧ ಪ್ರಚಾರ ಮಾಡಿ ಚುನಾವಣೆಯಲ್ಲಿ ಸೋಲಿಸಿದ್ದರು. ಅಂಬೇಡ್ಕರ್ ನಿಧನರಾದಾಗ ಅವರ ಸಮಾಧಿಗೆ ಹತ್ತಡಿ ಜಾಗವನ್ನೂ ಕೊಡಲಿಲ್ಲ, ಇಂತಹವರಿಗೆ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆಯೇ ಇಲ್ಲ’ ಎಂದು ಅಶೋಕ ಹೇಳಿದರು.
ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಬಳಿಕ ಕಾಂಗ್ರೆಸ್‌ನವರಿಗೆ ತಳಮಳ ಆರಂಭವಾಗಿದೆ, ಅದಕ್ಕಾಗಿ ಈಗ ಇಷ್ಟೆಲ್ಲ ನಾಟಕ ಮಾಡುತ್ತಿದ್ದಾರೆ. ಮೋದಿ ಅವರಿಂದಾಗಿಯೇ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.