ADVERTISEMENT

ಹೊಸಪೇಟೆ | ತುಂಗಭದ್ರೆ ಕೃಪೆ: ಕೆರೆಗಳತ್ತ ನೀರು

ಎಂ.ಜಿ.ಬಾಲಕೃಷ್ಣ
Published 26 ಜುಲೈ 2025, 6:14 IST
Last Updated 26 ಜುಲೈ 2025, 6:14 IST
ಹೊಸಪೇಟೆ ತಾಲ್ಲೂಕು ತಳವಾರಘಟ್ಟದಲ್ಲಿರುವ ಬೃಹತ್‌ ಪಂಪ್‌ಗಳು
ಹೊಸಪೇಟೆ ತಾಲ್ಲೂಕು ತಳವಾರಘಟ್ಟದಲ್ಲಿರುವ ಬೃಹತ್‌ ಪಂಪ್‌ಗಳು   

ಹೊಸಪೇಟೆ (ವಿಜಯನಗರ): ಪಾಪಿನಾಯಕನಹಳ್ಳಿ ಏತ ನೀರಾವರಿ ಯೋಜನೆ ಸಂಪೂರ್ಣ ವಿಫಲವಾಗಿದೆ, ಕೆರೆಗಳಿಗೆ ನೀರೇ ಹರಿಯುತ್ತಿಲ್ಲ ಎಂಬ ಆರೋಪವನ್ನು ತುಂಗಭದ್ರಾ ನದಿ ಈ ವರ್ಷವೂ ಅಲ್ಲಗಳೆದಿದ್ದು, 16 ಕೆರೆಗಳಿಗೆ ಇದೀಗ ನೀರು ಹರಿಯುತ್ತಿದೆ.

ತಳವಾರಘಟ್ಟ ಜಾಕ್ವೆಲ್‌ ಪಂಪ್‌ಹೌಸ್‌ನಲ್ಲಿ ತಲಾ 1,140 ಅಶ್ವಶಕ್ತಿಯ 5 ಪಂಪ್‌ಗಳು ಇದ್ದು,  ಸದ್ಯ ನಾಲ್ಕು ಪಂಪ್‌ಗಳನ್ನು ಚಾಲೂಗೊಳಿಸಿ ನೀರನ್ನು ಎತ್ತಲಾಗುತ್ತಿದೆ. ಒಂದು ಪಂಪ್‌ ಅನ್ನು ಹೆಚ್ಚುವರಿಯಾಗಿ ಇರಿಸಿಕೊಳ್ಳಲಾಗಿದೆ, ನದಿಯಲ್ಲಿ ನೀರು ಉತ್ತಮವಾಗಿ ಹರಿಯುತ್ತಿರುವುದರಿಂದ ಈ ಬಾರಿ ಬಹುತೇಕ ಕೆರೆಗಳು ಭರ್ತಿಯಾಗುವ ಆಶಯ ಇಟ್ಟುಕೊಳ್ಳಲಾಗಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಲ್.ಧರ್ಮರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗವಿಯಪ್ಪ ಛಲ: ಮಳೆ ಸಮೃದ್ಧ ಸುರಿದ ಕಾರಣ ಕೆರೆಗಳಿಗೆ ನೀರು ಹರಿಸಲೇಬೇಕು ಎಂದು ಕಳೆದ ವರ್ಷ ಶಾಸಕ ಎಚ್‌.ಆರ್.ಗವಿಯಪ್ಪ ಅವರು ಹಠಕ್ಕೆ ಬಿದ್ದು ಅದನ್ನು ಸಾಧಿಸಿದ್ದರು. ಅದರಿಂದ 14 ಕೆರೆಗಳು ಭರ್ತಿಯಾಗಿದ್ದವು. ಮಳೆ ನೀರಿನಿಂದ ಶೇ 60ರಷ್ಟು ಹಾಗೂ ಪಂಪ್‌ ಮಾಡಿದ್ದರಿಂದ ಶೇ 40ರಷ್ಟು ಕೆರೆಗಳು ಭರ್ತಿಯಾಗಿದ್ದವು. ಈ ಬಾರಿ ಸಹ ಅದೇ ಪರಿಸ್ಥಿತಿ ಇದೆ. ಇನ್ನೂ ಹೆಚ್ಚುವರಿಯಾಗಿ ಎರಡರಿಂದ ಮೂರು ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನ ನಡೆದಿದೆ. ಐದು ಕೆರೆಗಳ ವಿಚಾರದಲ್ಲಿ ಕೆಲವೊಂದು ತಾಂತ್ರಿಕ ತೊಡಕುಗಳಿವೆ ಎಂದು ಹೇಳಲಾಗಿದೆ.

ADVERTISEMENT

ಬರಗಾಲದಿಂದ ಸಮೃದ್ಧಿಯತ್ತ: ಮಾಜಿ ಸಚಿವ ಆನಂದ್ ಸಿಂಗ್ ಅವರ ಕನಸಿನ ಕೂಸು ಪಿ.ಕೆ.ಹಳ್ಳಿ ಏತ ನೀರಾವರಿ ಯೋಜನೆ. ಈ ಯೋಜನೆ ಬಹುತೇಕ ಪೂರ್ಣಗೊಂಡದ್ದು 2023ರಲ್ಲಿ. ಆದರೆ ಆ ವರ್ಷ ತೀವ್ರ ಮಳೆ ಕೊರತೆಯಿಂದ ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಿರಲಿಲ್ಲ, ಹೀಗಾಗಿ ತಳವಾರಘಟ್ಟ ಜಾಕ್ವೆಲ್‌ಗೆ ನೀರು ಸಿಕ್ಕಿರಲಿಲ್ಲ. 2024ರಲ್ಲಿ ಜುಲೈ ಮೂರನೇ ವಾರದಲ್ಲೇ ತುಂಗಭದ್ರಾ ಜಲಾಶಯ ಭರ್ತಿಯಾಗಿತ್ತು ಹಾಗೂ ಅಣೆಕಟ್ಟೆಯಿಂದ ನೀರು ಹೊರಬಿಡಲಾಗಿತ್ತು. ಇದರಿಂದಾಗಿ ಕೆರೆಗಳಿಗೆ ನೀರು ಹರಿಸುವುದು ಸಾಧ್ಯವಾಗಿತ್ತು. ಈ ಬಾರಿಯೂ ಮುಂಗಾರು ಮಳೆ ಬೇಗನೆ ಶುರುವಾಗಿ ಜುಲೈ 1ರಿಂದಲೇ ಅಣೆಕಟ್ಟೆಯಿಂದ ನೀರು ಹರಿಯತೊಡಗಿದ್ದು, ಸದ್ಯ 26 ಸಾವಿರ ಕ್ಯುಸಕ್‌ನಷ್ಟು ನೀರು ನದಿಗೆ ಹರಿಯುತ್ತಿದೆ.

ಎಚ್‌.ಆರ್.ಗವಿಯಪ್ಪ
ಇದೇ ರೀತಿ ಇನ್ನೂ 15 ದಿನ ನೀರು ಹರಿದರೆ ನಮ್ಮ ಕೆರೆ ತುಂಬಿಬಿಡುತ್ತದೆ ಇದರಿಂದ ಸುತ್ತಮುತ್ತಲಿನ ಅಂತರ್ಜಲ ಸಹ ಹೆಚ್ಚುತ್ತದೆ ಶಾಸಕರಿಗೆ ಅಧಿಕಾರಿಗಳಿಗೆ ಧನ್ಯವಾದಗಳು
ಕೊಟ್ರಪ್ಪ ವಡ್ಡರಹಳ್ಳಿ ರೈತ
ಈ ಬಾರಿ ಉತ್ತಮ ಮಳೆ ಸುರಿದು ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಜಲಾಶಯದ ನೀರು ತಳವಾರಘಟ್ಟ ಜಾಕ್ವೆಲ್‌ಗೆ ಬರುತ್ತಿರುವುದರಿಂದ ಕೆರೆಗಳು ಭರ್ತಿಯಾಗುತ್ತಿವೆ
ಎಚ್.ಆರ್.ಗವಿಯಪ್ಪ ಶಾಸಕ
ಪಾವಗಡದಂತೆಯೇ ಮತ್ತೊಂದು ಯೋಜನೆಗೆ ಒತ್ತಡ
‘ಹೊಸಪೇಟೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಪಾವಗಡ ಯೋಜನೆಯಂತೆಯೇ ಜಲಾಶಯದ ಹಿನ್ನೀರಿನಿಂದಲೇ ನೀರೆತ್ತುವಂತಹ ಇನ್ನೊಂದು ಪ್ರತ್ಯೇಕ ಯೋಜನೆಗೆ ಅನುಮತಿ ಕೊಡಬೇಕೆಂದು ಮುಖ್ಯಮಂತ್ರಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದೇನೆ. ಅದಕ್ಕೆ ಸಮ್ಮತಿ ಸಿಗುವ ಆಶಯ ಇದೆ. ಹೀಗಾದರೆ ನಿರಂತರ 6 ತಿಂಗಳು ನೀರು ಎತ್ತುವುದು ಸಾಧ್ಯವಾಗಲಿದೆ ಹಾಗೂ ಜಲಾಶಯ ಸಮೀಪದ ಹೊಸಪೇಟೆ ತಾಲ್ಲೂಕಿನ ಇತರೆಡೆ ಜಲಸಮೃದ್ಧಿ ಆಗಲಿದೆ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.