ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಗೆ ಮೂರು ದಿನಗಳ ಭೇಟಿ ನೀಡುತ್ತಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಗುರುವಾರ ಬೆಳಿಗ್ಗೆಯೇ ಇಲ್ಲಿನ ಕೆಕೆಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅವಧಿ ಮೀರಿದ ಆಹಾರ ಸಾಮಗ್ರಿಗಳನ್ನು ಮಾರಾಟಕ್ಕೆ ಇಟ್ಟಿದ್ದನ್ನು ಕಂಡು ಸಿಡಿಮಿಡಿಗೊಂಡರು.
ಬಸ್ ನಿಲ್ದಾಣದ ಬೇಕರಿ, ತಿಂಡಿ ಅಂಗಡಿಗಳಿಗೆ ಭೇಟಿ ನೀಡಿದ ಅವರು, ಅವಧಿ ಮೀರಿದ ನೀರಿನ ಬಾಟಲ್, ತಿಂಡಿ ಪೊಟ್ಟಣಗಳನ್ನು ಕಂಡು ಸಿಡಿಮಿಡಿಗೊಂಡರು.
‘ನಿಲ್ದಾಣದಲ್ಲಿ ನೀವು ಪರಿಶೀಲನೆ ಮಾಡೋದಿಲ್ವೇ?’ ಎಂದು ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ನಗರಸಭೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಉಪ ಲೋಕಾಯುಕ್ತರು, ‘ನೀವೇನೋ ಹೊಟ್ಟೆಪಾಡಿಗೆ ತಿಂಡಿ, ತಿನಿಸುಗಳನ್ನು ಮಾರಾಟ ಮಾಡ್ತಿದ್ದೀರಿ, ಜನರಿಗೆ ಅವಧಿಗೆ ಮೀರಿದ ತಿಂಡಿ, ತಿನಿಸು, ನೀರು ಏಕೆ ಕೊಡ್ತೀರಿ?’ ಎಂದು ಅಂಗಡಿಯವರನ್ನು ಪ್ರಶ್ನಿಸಿದರು.
ನಿಲ್ದಾಣದ ಶೌಚಾಲಯಕ್ಕೂ ಭೇಟಿ ನೀಡಿ, ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಕೋಪಗೊಂಡರು. ‘ನಿಲ್ದಾಣದ ಹೊರಗಡೆಯೇ ಗಲೀಜು ಮಾಡುತ್ತಾರೆ, ಇದನ್ನು ಕೇಳೋಕಾಗಲ್ವಾ?’ ಎಂದು ಪ್ರಶ್ನಿಸಿದರು.
ದ್ವಿಚಕ್ರ ವಾಹನ ನಿಲುಗಡೆ ಸ್ಥಳಕ್ಕೂ ತೆರಳಿ ಅಲ್ಲಿನ ಅವ್ಯವಸ್ಥೆಗೂ ಚಾಟಿ ಬೀಸಿದರು. ಪಾರ್ಕಿಂಗ್ ಶುಲ್ಕದ ಬಗ್ಗೆ ಫಲಕ ಹಾಕದೆ ಇರುವುದನ್ನು ಗಮನಿಸಿ ತಕ್ಷಣ ಅಳವಡಿಸಲು ಸೂಚಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ: ಗಾದಿಗನೂರು ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮಾತನಾಡಿಸಿದ ಉಪಲೋಕಾಯುಕ್ತರು, ಬಸ್ ಸೌಕರ್ಯದ ಬಗ್ಗೆ ವಿಚಾರಿಸಿದರು. ಸಂಡೂರು ಬಸ್ ಹತ್ತಿ, ಪ್ರಯಾಣಿಕರನ್ನು ಮಾತನಾಡಿಸಿ, ವ್ಯಾಪಾರ ಮಾಡುವ ಮಹಿಳೆಯರ ಕಷ್ಟ–ಸುಖ ಆಲಿಸಿದರು. ‘ದುಡಿದು ತಿನ್ನುವ ಇವರಿಗೆ ಸಮಸ್ಯೆ ಮಾಡಬೇಡಿ’ ಎಂದು ನಿರ್ವಾಹಕರಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಎಸ್ಪಿ ಶ್ರೀಹರಿಬಾಬು ಬಿ.ಎಲ್., ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ, ಎಎಸ್‌ಪಿ ಸಲೀಂ ಪಾಷಾ, ಡಿವೈಎಸ್ಪಿ ಮಂಜುನಾಥ್ ತಳವಾರ್, ನಗರಸಭೆ ಆಯುಕ್ತ ಮನೋಹರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.