ADVERTISEMENT

ಹೂವಿನಹಡಗಲಿ:ಯೂರಿಯಾ ಜತೆಗೆ ಅನವಶ್ಯಕ ಗೊಬ್ಬರ!

ಹೂವಿನಹಡಗಲಿಯಲ್ಲಿ ಯೂರಿಯಾ ದಾಸ್ತಾನಿಲ್ಲ: ರೈತರು-ಮಾರಾಟಗಾರರಿಗೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 6:50 IST
Last Updated 17 ಜುಲೈ 2025, 6:50 IST
ಹೂವಿನಹಡಗಲಿಯ ಗೋದಾಮಿನಲ್ಲಿ ಗೊಬ್ಬರ ದಾಸ್ತಾನು ಮಾಡುತ್ತಿರುವುದು
ಹೂವಿನಹಡಗಲಿಯ ಗೋದಾಮಿನಲ್ಲಿ ಗೊಬ್ಬರ ದಾಸ್ತಾನು ಮಾಡುತ್ತಿರುವುದು   

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಮುಂಗಾರು ಬೆಳೆಗಳಿಗೆ ಯೂರಿಯಾ ಅಭಾವ ಉಂಟಾಗಿದ್ದು, ರೈತರು ಗೊಬ್ಬರಕ್ಕಾಗಿ ಪರದಾಡುವಂತಾಗಿದೆ.

ಜೋಳ, ಮೆಕ್ಕೆಜೋಳ ಬಿತ್ತನೆಯಾಗಿ ತಿಂಗಳಾಗಿದೆ. ಮಳೆ ಕೊರತೆ ನಡುವೆ ಬೆಳೆ ಉಳಿಸಿಕೊಳ್ಳುವ ಸವಾಲು ರೈತರಿಗೆ ಎದುರಾಗಿದೆ. ಕೆಲ ದಿನಗಳಿಂದ ತುಂತುರು ಮಳೆ ಸುರಿಯುತ್ತಿರುವುದರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಸಕಾಲದಲ್ಲಿ ಗೊಬ್ಬರ ನೀಡದಿದ್ದರೆ ಇಳುವರಿ ಬರುವುದಿಲ್ಲ ಎಂಬ ಆತಂಕದಿಂದ ರೈತರು ಅಂಗಡಿಗಳಿಗೆ ಅಲೆಯುತ್ತಿದ್ದಾರೆ. ‘ನೋ ಸ್ಟಾಕ್’ ಉತ್ತರದಿಂದ ನಿರಾಸೆಗೊಂಡಿದ್ದಾರೆ. ನ್ಯಾನೋ ಯೂರಿಯಾ ಲಭ್ಯವಿದ್ದರೂ ಇದರ ಬಳಕೆಗೆ ರೈತರು ಒಲವು ತೋರುತ್ತಿಲ್ಲ.

ಸರ್ಕಾರ ಯೂರಿಯಾ ಗೊಬ್ಬರಕ್ಕೆ ಪೊಟ್ಯಾಷ್, ಡಿಎಪಿ, ನ್ಯಾನೋ ಡಿಎಪಿ, ನ್ಯಾನೋ ಯೂರಿಯಾ ಲಿಂಕ್ ಮಾಡಿದೆ. ಗೊಬ್ಬರ ಮಾರಾಟಗಾರರು ಐದು ಟನ್ ಯೂರಿಯಾಕ್ಕೆ ಬೇಡಿಕೆ ಸಲ್ಲಿಸಿದರೆ 10 ಟನ್ ಪೊಟ್ಯಾಷ್, ಎರಡು ಬಾಕ್ಸ್ ನ್ಯಾನೋ ಡಿಎಪಿ ಕಡ್ಡಾಯವಾಗಿ ಖರೀದಿಸಬೇಕು. ಬೇಡಿಕೆ ಇಲ್ಲದ ಅನವಶ್ಯಕ ಗೊಬ್ಬರಗಳನ್ನು ಲಿಂಕ್ ಮಾಡಿರುವುದರಿಂದ ಇಲ್ಲಿನ ರಸಗೊಬ್ಬರ ಮಾರಾಟಗಾರರು ಯೂರಿಯಾ ಬೇಡಿಕೆ ಸಲ್ಲಿಸುವುದನ್ನು ಬಿಟ್ಟಿದ್ದಾರೆ. ಗೊಬ್ಬರ ಅಭಾವಕ್ಕೆ ಇದು ಕೂಡ ಕಾರಣ ಎಂದು ಹೇಳಲಾಗುತ್ತಿದೆ.

ADVERTISEMENT

ಕೆಲ ವ್ಯಾಪಾರಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಯೂರಿಯಾವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ದಾಸ್ತಾನು ಲಭ್ಯವಿದ್ದರೂ ಇಲ್ಲ ಎನ್ನುತ್ತಿದ್ದಾರೆ. ಲಿಂಕ್ ಗೊಬ್ಬರ ಖರೀದಿಗೆ ಒತ್ತಡ ಹೇರುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ.

‘ಯೂರಿಯಾ ಜತೆಗೆ ಲಿಂಕ್ ನಲ್ಲಿ ಕಳಿಸಿರುವ 148 ಚೀಲ ಪೊಟ್ಯಾಷ್ ಗೊಬ್ಬರ ಗೋದಾಮಿನಲ್ಲಿ ಕೊಳೆಯುತ್ತಿದೆ. ರೈತರು ಅನವಶ್ಯಕ ಗೊಬ್ಬರ ಖರೀದಿಸುವುದಿಲ್ಲ. ಕಂಪನಿಯವರು ಲಿಂಕ್ ಕಡ್ಡಾಯ ಮಾಡಿರುವುದರಿಂದ ಮೇ ತಿಂಗಳಿಂದ ಯೂರಿಯಾ ತರಿಸಿಲ್ಲ’ ಎಂದು ಬಾಲಾಜಿ ಟ್ರೇಡರ್ಸ್ನ ಶ್ರೀನಿವಾಸಮೂರ್ತಿ ಹೇಳಿದರು.

ಸರ್ಕಾರ ಲಿಂಕ್ ನಿಯಮವನ್ನು ಕೈ ಬಿಟ್ಟು ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡಬೇಕು. ಕೃಷಿ ಇಲಾಖೆಯವರು ಗೊಬ್ಬರ ವಹಿವಾಟಿನ ಮೇಲೆ ನಿಗಾ ಇರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಮಾರಾಟ ಮಳಿಗೆಯಲ್ಲಿ ಯೂರಿಯಾ ಲಭ್ಯ ಇಲ್ಲದಿರುವುದು
ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಲು ಸರ್ಕಾರ ಲಿಂಕ್ ನಿಯಮ ಮಾಡಿದೆ. ಮಾರಾಟಗಾರರು ರೈತರಿಗೆ ಒತ್ತಡ ಹೇರುವಂತಿಲ್ಲ. ಮುಂದಿನ ವಾರದೊಳಗೆ ಸಮಸ್ಯೆ ಬಗೆಹರಿಯಲಿದೆ
ಮಹ್ಮದ್ ಆಶ್ರಫ್ ಸಹಾಯಕ ಕೃಷಿ ನಿರ್ದೇಶಕ ಹೂವಿನಹಡಗಲಿ
10 ದಿನದಿಂದ ಯೂರಿಯಾ ಸಿಗುತ್ತಿಲ್ಲ. ಮೆಕ್ಕೆಜೋಳ ಬೆಳವಣಿಗೆ ಹಂತದಲ್ಲಿ ಗೊಬ್ಬರ ನೀಡದಿದ್ದರೆ ಇಳುವರಿ ಬರುವುದಿಲ್ಲ. ಸಮರುವಂತೆ ಮಾಡಬೇಕು
ಮುದೇಗೌಡ್ರ ಅಶೋಕ ಹೊಳಗುಂದಿ

Cut-off box - ಶೇ 94.2ರಷ್ಟು ಪ್ರದೇಶದಲ್ಲಿ ಬಿತ್ತನೆ ತಾಲ್ಲೂಕಿನ 57021 ಹೆಕ್ಟೇರ್ ಸಾಗುವಳಿ ವಿಸ್ತೀರ್ಣದಲ್ಲಿ 53628 ಹೆಕ್ಟೇರ್‌ (ಶೇ 94.2) ಬಿತ್ತನೆಯಾಗಿದೆ. ಇದರಲ್ಲಿ 38500 ಹೆಕ್ಟೇರ್‌  ಮೆಕ್ಕೆಜೋಳ ಪ್ರಧಾನ ಬೆಳೆಯಾಗಿದೆ. 1200 ಹೆಕ್ಟೇರ್ ಹೈಬ್ರಿಡ್ ಜೋಳ 1360 ಹೆಕ್ಟೇರ್‌ ತೊಗರಿ 200 ಹೆಕ್ಟೇರ್‌ ಸಿರಿಧಾನ್ಯ ಬಿತ್ತನೆಯಾಗಿದೆ. ಈ ಎಲ್ಲ ಬೆಳೆಗಳಿಗೆ 4000 ಟನ್ ಯೂರಿಯಾ ಅವಶ್ಯಕತೆ ಇದೆ. ಬೇಡಿಕೆಯಷ್ಟು ಗೊಬ್ಬರ ಪೂರೈಕೆಯಾಗದೇ ಅಭಾವ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.