ADVERTISEMENT

ವಿಜಯನಗರ | ಆ.8ಕ್ಕೆ `ಸೆಪ್ಟೆಂಬರ್- 10' ಚಿತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 7:36 IST
Last Updated 18 ಜುಲೈ 2025, 7:36 IST

ಹೊಸಪೇಟೆ: ಆತ್ಮಹತ್ಯೆ ನಿವಾರಣೆ ಕುರಿತು ಜಾಗೃತಿಯ ಸಂದೇಶ ಸಾರುವ `ಸೆಪ್ಟೆಂಬರ್- 10' ಸಿನಿಮಾ ಆಗಸ್ಟ್ 8ರಂದು ತೆರೆ ಕಾಣಲಿದೆ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಓಂ ಸಾಯಿ ಪ್ರಕಾಶ್ ಹೇಳಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಒತ್ತಡದಿಂದಾಗಿ ಜನರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಎಲ್ಲ ವರ್ಗದ ಎಲ್ಲ ವಯೋಮಾನದವರನ್ನೂ ಇದು ಆವರಿಸಿರುವುದು ಆತಂಕಕಾರಿ ಬೆಳವಣಿಗೆ ಎಂದರು.

‘ನಾನು ಈ ಹಿಂದೆ ನಿರ್ಮಿಸಿದ್ದ ಅಣ್ಣ- ತಂಗಿ, ತವರಿಗೆ ಬಾ ತಂಗಿ ಚಿತ್ರಗಳು ಪ್ರೇಕ್ಷಕರಲ್ಲಿ ಕಣ್ಣೀರು ತರಿಸಿದ್ದರೂ, ಅವರಲ್ಲಿ ಭಾತೃತ್ವ ಗಟ್ಟಿಗೊಳಿಸಿತ್ತು. ಈ ವರೆಗೆ 105 ಚಿತ್ರಗಳನ್ನು ನಿರ್ಮಿಸಿದ್ದು, ಹ್ಯಾಟ್ರಿಕ್ ಹೀರೋ ಶಿವಣ್ಣ, ರವಿಚಂದ್ರನ್, ಉಪೇಂದ್ರ, ಮಾಲಾಶ್ರೀ ಸೇರಿದಂತೆ ಅನೇಕ ದಿಗ್ಗಜರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದೆ. ಆದರೆ, ಈ ಚಿತ್ರದಲ್ಲಿ ಕಥಾ ವಸ್ತುವೇ ಮುಖ್ಯವಾಗಿದೆ. ಇದರಲ್ಲಿ ನಾಯಕ ನಟ ಪಾತ್ರದಲ್ಲಿ ಅಭಿನಯಿಸಿರುವ ಜಯಸಿಂಹ ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ’ ಎಂದರು.

ADVERTISEMENT

ಪೋಷಕ ನಟ ಗಣೇಶ್ ರಾವ್ ಮಾತನಾಡಿ, ಇದೊಂದು ಸಾಮಾಜಿಕ ಕಳಕಳಿಯ ಚಿತ್ರವಾಗಿದೆ. ಚಿತ್ರದಲ್ಲಿ ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಉದ್ಯಮಿ ಕಾಫಿ ಡೇ ಮಾಲೀಕನ ಅಂತ್ಯವನ್ನೂ ಪರೋಕ್ಷವಾಗಿ ಬಿಂಬಿಸಲಾಗಿದೆ ಎಂದರು.

ಚಿತ್ರದ ನಾಯಕ ನಟ ಜಯಸಿಂಹ, ಕಾಂಗ್ರೆಸ್ ಮುಖಂಡ ಗುಜ್ಜಲ್ ನಾಗರಾಜ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ತಾರಿಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.