ADVERTISEMENT

ವಿಶ್ವ ಅಂಗವಿಕಲರ ದಿನಾಚರಣೆ; ‘ಪ್ರಜಾವಾಣಿ’ ಸಹಭಾಗಿತ್ವದಲ್ಲಿ ಕಾರ್ಯಕ್ರಮ

‘ಅಂಗವಿಕಲರಲ್ಲ, ವಿಶೇಷ ಚೇತನರು’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 8:48 IST
Last Updated 3 ಡಿಸೆಂಬರ್ 2022, 8:48 IST
   

ಹೊಸಪೇಟೆ (ವಿಜಯನಗರ): ‘ದೈಹಿಕ ನ್ಯೂನತೆ ಹೊಂದಿದವರು ಅಂಗವಿಕಲರಲ್ಲ, ವಿಶೇಷ ಚೇತನರು’ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್‌ ರಹೀಮಾನ್‌ ಎ. ನಂದಗುಡಿ ಹೇಳಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪಂಡಿತ್‌ ಪುಟ್ಟರಾಜ ಗವಾಯಿ ಕಲಾ ಸಂಘ, ‘ಪ್ರಜಾವಾಣಿ’ ಸಹಭಾಗಿತ್ವದಲ್ಲಿ ಶನಿವಾರ ನಗರದ ಗೃಹರಕ್ಷಕ ದಳದ ಕಚೇರಿಯಲ್ಲಿ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರಲ್ಲಿ ಸಾಕಷ್ಟು ಪ್ರತಿಭೆ ಇದೆ. ಎಲ್ಲ ಇದ್ದವರಲ್ಲಿ ಇರಲಾರದ ಕಲೆ, ಪ್ರತಿಭೆ ವಿಶೇಷ ಚೇತನರಲ್ಲಿದೆ. ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಚೇತನರು ಇಂದು ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯರಿಗಿಂತ ಹೆಚ್ಚು ಮನಸ್ಸಿನಿಂದ ಕೆಲಸ ಮಾಡುತ್ತಾರೆ. ಸಹಜವಾಗಿ ಇರುವವರಿಗೆ ವಿಶೇಷ ಚೇತನರೇ ಪ್ರೇರಣೆ ಎಂದು ಹೇಳಿದರು.

ADVERTISEMENT

ಪ್ರಧಾನ ಸಿವಿಲ್‌ ನ್ಯಾಯಾಧೀಶ ಕಿಶನ್ ಬಿ. ಮಾಡಲಗಿ ಮಾತನಾಡಿ, ಪ್ಯಾರಾ ಒಲಿಂಪಿಕ್‌ನಲ್ಲಿ ಭಾಗವಹಿಸಿ ವಿಶೇಷ ಚೇತನರು ಭಾರತಕ್ಕೆ ಚಿನ್ನ, ಬೆಳ್ಳಿ ಪದಕ ತಂದು ಕೊಟ್ಟಿದ್ದಾರೆ. ಪ್ರತಿಯೊಬ್ಬರಲ್ಲಿ ಪ್ರತಿಭೆ ಇರುತ್ತದೆ. ಅಂಗವಿಕಲರು ಯಾವುದರಲ್ಲೂ ಕಮ್ಮಿ ಇಲ್ಲ ಎಂದು ತಿಳಿಸಿದರು.

ತಾಯಿಯ ಗರ್ಭದಲ್ಲಿದ್ದಾಗಲೇ ಮಗುವಿನ ಆರೋಗ್ಯದ ಆರೈಕೆ ಮಾಡುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ. ಗರ್ಭದಲ್ಲಿದ್ದಾಗ ಮಗುವಿನಲ್ಲಿ ಸಣ್ಣಪುಟ್ಟ ಕೊರತೆಯಿದ್ದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಮಗು ಜನಿಸಿದ ನಂತರ ಪೊಲಿಯೋ ಸೇರಿದಂತೆ ಇತರೆ ಎಲ್ಲ ರೀತಿಯ ಲಸಿಕೆ ಹಾಕಿಸಬೇಕು ಎಂದು ಹೇಳಿದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಕರುಣಾನಿಧಿ ಮಾತನಾಡಿ, ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ಕಾಯ್ದೆ ರೂಪಿಸಿ ಅನೇಕ ಸೇವಾ ಸೌಲಭ್ಯಗಳನ್ನು ಒದಗಿಸಿದೆ. ಅಂಗವೈಕಲ್ಯಕ್ಕೆ ಒಳಗಾದವರು ಎಲ್ಲಿಯವರೆಗೆ ವಿದ್ಯಾಭ್ಯಾಸ ಪಡೆಯುತ್ತಾರೋ ಅಲ್ಲಿಯವರೆಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡಬೇಕಿದೆ. ಇದರ ಪ್ರಯೋಜನ ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದರು.
ಪಂಡಿತ್‌ ಪುಟ್ಟರಾಜ ಗವಾಯಿ ಕಲಾ ಸಂಘದ ಅಧ್ಯಕ್ಷೆ ಅಂಜಲಿ ಬೆಳಗಲ್‌ ಮಾತನಾಡಿ, ವಿಶ್ವಸಂಸ್ಥೆಯಲ್ಲಿ ಕೈಗೊಂಡ ನಿರ್ಣಯದ ಪ್ರಕಾರ ಪ್ರತಿ ವರ್ಷ ಡಿಸೆಂಬರ್‌ 3ರಂದು ವಿಶ್ವ ಅಂಗವಿಕಲರ ದಿನ ಆಚರಿಸಲಾಗುತ್ತಿದೆ. ಕಿವುಡುತನ, ಅಂಧತ್ವ, ಅಂಗವೈಕಲ್ಯ ಸೇರಿದಂತೆ 21 ಬಗೆಯ ಕಾಯಿಲೆ ಹೊಂದಿದವರು ಅಂಗವಿಕಲರು ಎಂದು ಸರ್ಕಾರ ಘೋಷಿಸಿದೆ ಎಂದು ತಿಳಿಸಿದರು.

ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶೆ ಹೇಮಲತಾ ಬಿ. ಹುಲ್ಲೂರ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ತೃಪ್ತಿ ಧರಣಿ, ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಸಂಜೀವ್‌ ಕುಮಾರ್ ಜಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶನ ವೀರನಗೌಡ, ಗ್ರೇಡ್‌–1 ತಹಶೀಲ್ದಾರ್‌ ವೆಂಕಟೇಶ್‌, ಗೃಹರಕ್ಷಕ ದಳದ ಸಮಾದೇಷ್ಟ ಅಧಿಕಾರಿ ಎಸ್‌.ಎಂ. ಗಿರೀಶ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.