ADVERTISEMENT

ಸಮಸ್ಯೆಗೆ ಯುವಜನತೆ ಮುಖಾಮುಖಿಯಾಗಲಿ: ಬಸವರಾಜ

ಸಿ.ಪಿ.ಐ(ಎಂ) ವಿದ್ಯಾರ್ಥಿ ಶಾಖೆಯ ಬಹಿರಂಗ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಬಸವರಾಜ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 15:18 IST
Last Updated 10 ಅಕ್ಟೋಬರ್ 2021, 15:18 IST
ಹೊಸಪೇಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಸಿಪಿಐ(ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ಮಾತನಾಡಿದರು. ಮುಖಂಡರಾದ ಎ. ಕರುಣಾನಿಧಿ, ಆರ್‌. ಭಾಸ್ಕರ್‌ ರೆಡ್ಡಿ, ಮರಡಿ ಜಂಬಯ್ಯ ನಾಯಕ ಹಾಗೂ ಎಂ. ಮುನಿರಾಜು ಇದ್ದಾರೆ
ಹೊಸಪೇಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಸಿಪಿಐ(ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ಮಾತನಾಡಿದರು. ಮುಖಂಡರಾದ ಎ. ಕರುಣಾನಿಧಿ, ಆರ್‌. ಭಾಸ್ಕರ್‌ ರೆಡ್ಡಿ, ಮರಡಿ ಜಂಬಯ್ಯ ನಾಯಕ ಹಾಗೂ ಎಂ. ಮುನಿರಾಜು ಇದ್ದಾರೆ   

ಹೊಸಪೇಟೆ(ವಿಜಯನಗರ): ‘ಸಮಕಾಲೀನ ಬಿಕ್ಕಟ್ಟುಗಳಿಗೆ ವಿದ್ಯಾರ್ಥಿಗಳು ಮತ್ತು ಯುವಜನತೆ ಮುಖಾಮುಖಿಯಾಗಬೇಕಾದ ಅಗತ್ಯವಿದೆ’ ಎಂದು ಸಿಪಿಐ(ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ತಿಳಿ‌ಸಿದರು.

ನಗರದ ಶ್ರಮಿಕ ಭವನದಲ್ಲಿ ಭಾನುವಾರ ಸಿಪಿಐ(ಎಂ) ಪಕ್ಷದ ವಿದ್ಯಾರ್ಥಿ ಶಾಖೆಯ ಪ್ರಥಮ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಹೊಸ ಶಿಕ್ಷಣ ನೀತಿ, ಬೆಲೆ ಏರಿಕೆ, ಬಂಡವಾಳಷಾಹಿಗಳ ಧೋರಣೆ ಮತ್ತು ಶ್ರಮಿಕ ವರ್ಗದ ಜನರ ಬದುಕಿನ ಸಮಸ್ಯೆಗಳಿಗೆ ಹೋರಾಟದ ಮೂಲಕ ಮುಖಾಮುಖಿ ಆಗಬೇಕು. ಸ್ವಾತಂತ್ರ್ಯ ನಂತರ ಶಿಕ್ಷಣದ ಮೂಲಕ ಸಮ ಸಮಾಜವನ್ನು ಕಟ್ಟಲು ಸಂವಿಧಾನದ ಆಶಯಗಳನ್ನು ಒಳಗೊಳ್ಳುವಂತೆ ಶೈಕ್ಷಣಿಕ ನೀತಿಗಳನ್ನು ರೂಪಿಸಲಾಯಿತು. ಆದರೆ, 2020ರ ಹೊಸ ಶಿಕ್ಷಣ ನೀತಿ ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟಾಗುವ ಧೋರಣೆಯನ್ನು ಹೊಂದಿದೆ’ ಎಂದು ಆರೋಪಿಸಿದರು.

ADVERTISEMENT

ವಿದ್ಯಾರ್ಥಿ ಶಾಖೆಯ ಕಾರ್ಯದರ್ಶಿ ಎಂ.ಮುನಿರಾಜು, ‘ಪಠ್ಯಕ್ರಮದ ಮೂಲಕ ಭಾರತದ ಕಣ್ಣೆದುರಿನ ಚರಿತ್ರೆಯನ್ನು ಹೊಸ ಶಿಕ್ಷಣ ನೀತಿ ಮೂಲಕ ತಿರುಚಲಾಗುತ್ತಿದೆ. ಅದಕ್ಕೆ ಯುವಜನತೆ ಪ್ರತಿರೋಧ ತೋರಿಸಬೇಕು. ಇಲ್ಲವಾದಲ್ಲಿ ಇಡೀ ಶಿಕ್ಷಣ ವ್ಯವಸ್ಥೆ ಹಾಳಾಗುವ ಆತಂಕವಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ವಿದ್ಯಾರ್ಥಿ ಶಾಖೆಯ ನೂತನ ಕಾರ್ಯದರ್ಶಿಯಾಗಿ ಸಂಗಮೇಶ ಶಿವಣಗಿ ಅವರನ್ನು ಆಯ್ಕೆ ಮಾಡಲಾಯಿತು.

ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ಆರ್.ಭಾಸ್ಕರ್ ರೆಡ್ಡಿ, ಮುಖಂಡರಾದ ಎಂ.ಜಂಬಯ್ಯ ನಾಯಕ, ಕರುಣಾನಿಧಿ, ಎಚ್.ಕೃಷ್ಣಮೂರ್ತಿ, ದೊಡ್ಡ ಬಸವರಾಜು, ತಾಯಶ್ರೀ, ಶಿವಕುಮಾರ್, ಸ್ವಪ್ನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.